ಬಂಟ್ವಾಳ, ಫೆ. 01 (DaijiworldNews/AA): ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅಮಾಯಕ ಆಟೋ ಚಾಲಕನ ಮೇಲೆ ಶನಿವಾರ ರಾತ್ರಿ ಮುಸುಕುಧಾರಿಗಳು ಕೈಯಿಂದ ಹಾಗೂ ಕಟ್ಟಿಗೆ ತುಂಡಿನಿಂದ ಹಲ್ಲೆ ನಡೆಸಿ ಮೊಬೈಲ್ ಎಗರಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕೆ. ರವೀಶ್ ಕುಲಾಲ್ (40), ಅಶೋಕ (42) ಬಂಧಿತ ಆರೋಪಿಗಳು.
ವಿಟ್ಲದ ಆಟೋ ಚಾಲಕ ಪರ್ಲಾರ್ ಇಸುಬು(56) ಎಂಬವರು ಶನಿವಾರ ರಾತ್ರಿ 7:30 ಸುಮಾರಿಗೆ ಮಹಿಳೆಯೊಬ್ಬರನ್ನು ಮನೆಗೆ ತಲುಪಿಸಿ ಹಿಂತಿರುಗುತ್ತಿದ್ದರು. ಈ ವೇಳೆ ವಿಟ್ಲ ಕಸಬಾ ಗ್ರಾಮದ ಮಾರ್ನಮಿಗುಡ್ಡೆ ಬಳಿ ಬಟ್ಟೆಯಿಂದ ಮುಖ ಮುಚ್ಚಿಕೊಂಡು ಬಂದಿದ್ದ ಮೂವರು ಯುವಕರು ಆಟೋ ಚಾಲಕನ ತಡೆದು ವಿಚಾರಿಸಿದ್ದಾರೆ. ನಾನು ಬಾಡಿಗೆ ಹೋಗಿ ಬರುತ್ತಿದ್ದೇನೆಂದು ಹೇಳಿದರೂ ಕೇಳಿಸಿಕೊಳ್ಳದ ಮುಸುಕುಧಾರಿಗಳು ಚಾಲಕನ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಮನಬಂದಂತೆ ಕೈಯಿಂದ ಹಾಗೂ ಕಟ್ಟಿಗೆ ತುಂಡಿನಿಂದ ಹೊಡೆದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ವಿಟ್ಲ ಠಾಣೆಯಲ್ಲಿ ಚಾಲಕ ದೂರು ದಾಖಲಿಸಿದ್ದರು.
ಆಟೋ ಚಾಲಕ ಪರ್ಲಾರ್ ಇಸುಬು ಅವರು ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 22/2026 ಕಲಂ: 126(2), 115(2), 118(2), 309(4) ಜೊತೆಗೆ 3(5) BNS–2023 ರಂತೆ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.