ಬಂಟ್ವಾಳ, ಫೆ. 01 (DaijiworldNews/AA): ಬಂಟ್ವಾಳ ತಾಲೂಕಿನ ವಿಟ್ಲದ ಒಕ್ಕೆತ್ತೂರು ರಾಯಲ್ ವಿಲ್ಲಾ ಸಮೀಪವಿರುವ ವಕೀಲರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿರುವುದು ವರದಿಯಾಗಿದೆ.

ವಕೀಲರಾದ ಸಫಿಯಾ ನೌಫಲ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕುಟುಂಬದ ಸದಸ್ಯರು ಸುಮಾರು ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ರು. ಹೀಗಾಗಿ ಘಟನೆಯ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.
ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ ಎಂದು ಶಂಕಿಸಲಾಗಿದೆ. ಮನೆಯ ಒಳಗಿದ್ದ ಕಪಾಟುಗಳನ್ನು ಜಾಲಾಡಿದ ಕಳ್ಳರಿಗೆ ಯಾವುದೇ ಅಮೂಲ್ಯ ವಸ್ತುಗಳು ಅಥವಾ ನಗದು ಸಿಗದಿದ್ದಾಗ, ವಕೀಲರಿಗೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಕುಟುಂಬದವರಿಗೆ ಮಾಹಿತಿ ನೀಡಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.