ಮಂಗಳೂರು, ಫೆ. 01 (DaijiworldNews/AA): ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಆಂಜೆಲೊರ್ ಘಟಕ, ಗಾರ್ಡಿಯನ್ ಏಂಜಲ್ ಚರ್ಚ್, ನಾಗೋರಿ, ಮಂಗಳೂರು, ಇದರ ಮುಂದಾಳತ್ವದಲ್ಲಿ ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ನೀತಿ ಹಾಗೂ ಶಾಂತಿ ಆಯೋಗದ ಸಹಯೋಗದೊಂದಿಗೆ ಫೆಬ್ರವರಿ 1 ರಂದು ಬೆಳಿಗ್ಗೆ 10.30ಕ್ಕೆ ಗಾರ್ಡಿಯನ್ ಏಂಜಲ್ ಚರ್ಚ್ ಸಭಾಭವನದಲ್ಲಿ ಪೋಲಿಸ್ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು.


ಸಭೆಯಲ್ಲಿ ಆಂಜೆಲೊರ್ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಫ್ರೆಡ್ರಿಕ್ ಮೊಂತೇರೊ, ದಕ್ಷಿಣ ವಲಯದ ಸಹಾಯಕ ಪೋಲಿಸ್ ಆಯುಕ್ತೆ ವಿಜಯಕ್ರಾಂತಿ, ಮಂಗಳೂರು ನಗರ ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಶಿವಕುಮಾರ್, ವೆನ್ಲಾಕ್ ಜಿಲ್ಲಾಸ್ಪತ್ರೆಯ ಆಯುಷ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ್ ಎ. ಜೆ. ಮೆಸ್ಕಾಂ ಮರೋಳಿ ವಿಭಾಗದ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ಶಿವಪ್ರಕಾಶ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಶನ್ ಪತ್ರಾವೊ ಮತ್ತು ಕಥೊಲಿಕ್ ಸಭಾದ ಅಧ್ಯಕ್ಷ ಆಲ್ಬರ್ಟ್ ಲಸ್ರಾದೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಧರ್ಮಗುರುಗಳಾದ ವಂದನೀಯ ಫ್ರೆಡ್ರಿಕ್ ಮೊಂತೇರೋರವರು ಜನರ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುವಲ್ಲಿ ಮಂಗಳೂರು ನಗರದ ವಿವಿಧ ಇಲಾಖೆಗಳ ಅಧಿಕಾರಿಗಳ ಜನಪರ ಮನೋಭಾವದ ಪಾತ್ರವನ್ನು ಹೊಗಳಿದರು.
ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಸಹಾಯಕ ಪೋಲಿಸ್ ಆಯುಕ್ತೆ ವಿಜಯಕ್ರಾಂತಿ ಅವರು ಸೈಬರ್ಕ್ರೈಮ್ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ವಿವರಿಸಿದರು. ಯುವಪೀಳಿಗೆಯಲ್ಲಿ ವ್ಯಾಪಕವಾಗುತ್ತಿರುವ ಮಾದಕದ್ರವ್ಯ ವ್ಯಸನದ ಬಗ್ಗೆ ಮಾತನಾಡಿ ಹೆತ್ತವರು ಯಾವ ರೀತಿ ತಮ್ಮ ಮಕ್ಕಳ ಮೇಲೆ ಕಣ್ಗಾವಲು ಇರಿಸಬೇಕೆಂದು ಮಾಹಿತಿ ನೀಡಿದರು.
ಡಾ. ಪ್ರಕಾಶ್ ಎ. ಜೆ. ಯವರು ಆಯುಷ್ ಚಿಕಿತ್ಸಾ ಪದ್ಧತಿಯ ಬಗ್ಗೆ ಮಾಹಿತಿ ನೀಡಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಆಯುಷ್ ವಿಭಾಗದಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಕಾಶ್ ಅವರು ಸಾರ್ವಜನಿಕರಿಂದ ಮೆಸ್ಕಾಂಗೆ ಬರುವ ವಿವಿಧ ದೂರುಗಳ ಬಗ್ಗೆ ವಿವರಿಸಿ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗ್ರಾಹಕರು ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.
ಪ್ರಶ್ನೋತ್ತರದ ವೇಳೆಯಲ್ಲಿ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಲು ಮತ್ತು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆಯಲ್ಲಿ ಮಂಗಳೂರು ನಗರ ಪೋಲಿಸ್ ಠಾಣೆಯ ಸಿಬ್ಬಂದಿ, ಮೆಸ್ಕಾಂನ ಅಧಿಕಾರಿಗಳು, ಸಂತ ಅಲೋಶಿಯಸ್ ಕಾಲೇಜಿನ ಡೀನ್ ಡಾ. ರೋಜ್ ವೀರಾ ಡಿ'ಸೋಜಾ, ಸಾಮಾಜಿಕ ಕಾರ್ಯಕರ್ತ ಜಿ. ಕೆ. ಭಟ್ ಹಾಜರಿದ್ದರು. ಸಭೆಯಲ್ಲಿ ಸುಮಾರು 250 ಜನ ಸಾರ್ವಜನಿಕರು ಭಾಗವಹಿಸಿದ್ದರು.
ಕಥೊಲಿಕ್ ಸಭೆಯ ಅಧ್ಯಕ್ಷ ಆಲ್ಬರ್ಟ್ ಲಸ್ರಾದೊ ಅವರು ನೆರೆದವರನ್ನು ಸ್ವಾಗತಿಸಿದರು. ನೀತಿ ಹಾಗೂ ಶಾಂತಿ ಆಯೋಗದ ಕಾರ್ಯದರ್ಶಿ ಮನೋಹರ್ ಸಲ್ಡಾನಾ ಅವರು ಧನ್ಯವಾದ ಸಮರ್ಪಿಸಿದರು. ಲೊಲಿನಾ ಡಿ'ಸೋಜಾ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.