ಉಡುಪಿ, ಫೆ. 01 (DaijiworldNews/AA): ಚಲಿಸುತ್ತಿದ್ದ ಬೈಕ್ನಿಂದ ಕೆಳಗೆ ಬಿದ್ದು 53 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ಕಿನ್ನಿಮುಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಂಭವಿಸಿದೆ.

ಮೃತರನ್ನು ಭಾಗೀರಥಿ (53) ಎಂದು ಗುರುತಿಸಲಾಗಿದೆ.
ಮೃತ ಮಹಿಳೆಯ ಮಗ ರಜತ್ ಆಚಾರ್ಯ ಬೈಕ್ ಚಲಾಯಿಸುತ್ತಿದ್ದರು ಮತ್ತು ಭಾಗೀರಥಿ ಅವರು ಹಿಂಬದಿ ಕುಳಿತಿದ್ದರು. ಇವರು ಕಾಪು ಕಡೆಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕಿನ್ನಿಮುಲ್ಕಿಯ 'ಜೈ ವೀಲ್ ಅಲೈನ್ಮೆಂಟ್' ಬಳಿ ಬೈಕ್ ಹಠಾತ್ತನೆ ಸ್ಕಿಡ್ ಆಗಿದೆ. ಇದರಿಂದಾಗಿ ಸವಾರನ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಭಾಗೀರಥಿ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಉಡುಪಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.