ಉಡುಪಿ, ಫೆ. 01 (DaijiworldNews/TA): ಫಸ್ಟ್ ಸ್ಟೆಪ್ ಟ್ರಸ್ಟ್ ವತಿಯಿಂದ ಸತತ ನಾಲ್ಕನೇ ವರ್ಷವಾಗಿ ಆಯೋಜಿಸಲಾದ ಉಡುಪಿ ಜಿಲ್ಲಾಮಟ್ಟದ ‘ಹೆಜ್ಜೆ ಸಂಭ್ರಮ’ ಕಾರ್ಯಕ್ರಮವು ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ “ಅನುಕಂಪ ಬೇಡ, ಅವಕಾಶ ಕೊಡಿ” ಎಂಬ ಪ್ರೇರಣಾದಾಯಕ ಧ್ಯೇಯದೊಂದಿಗೆ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಶಾಸಕ ಯಶಪಾಲ್ ಸುವರ್ಣ ಸೇರಿದಂತೆ ಅತಿಥಿ ಗಣ್ಯರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಎಸ್ಪಿ ಹರಿರಾಂ ಶಂಕರ್, ಮಾತನಾಡಿ, “ವಿಶೇಷ ಮಕ್ಕಳ ಜೊತೆ ನಿಂತಿರುವ ಪೋಷಕರು, ಸಿಬ್ಬಂದಿ, ಶಾಲೆಗಳು ಹಾಗೂ ಎನ್ಜಿಒಗಳಿಗೆ ಧನ್ಯವಾದಗಳು. ಈ ಕಾರ್ಯಕ್ರಮ ಈ ಮಕ್ಕಳಿಗೆ ಒಂದು ಹಬ್ಬದಂತಿದೆ. ಇಂತಹ ಭಾರೀ ಜನಸಮಾಗಮವೇ ಈ ಪ್ರತಿಭಾವಂತ ಮಕ್ಕಳಿಗೆ ನಮ್ಮ ಬೆಂಬಲದ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ದೇವರು ಎಲ್ಲರನ್ನೂ ಸಮಾನವಾಗಿ ಸೃಷ್ಟಿಸಿದ್ದಾನೆ. ಸಮಾಜವೂ ಎಲ್ಲರನ್ನು ಸಮಾನವಾಗಿ ಕಾಣಬೇಕು. ಅಕ್ಷತಾ ಅವರು ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ಉಡುಪಿ ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದು, ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೈಟ್ ಲೋಟಸ್ ಹೋಟೆಲ್ ಉಡುಪಿ ಇದರ ವ್ಯವಸ್ಥಾಪಕ ನಿರ್ದೇಶಕ, ಅಜಯ್ ಪಿ. ಶೆಟ್ಟಿ, ಕಾರ್ಕಳದ ಆಡಿಟರ್ ಕಮಲಾಕ್ಷ ಕಾಮತ್, ಫಸ್ಟ್ ಸ್ಟೆಪ್ ಲೇಡೀಸ್ ಫಿಟ್ನೆಸ್ & ಕಿಡ್ಸ್ ಡ್ಯಾನ್ಸ್ ಸ್ಟುಡಿಯೋ ಮತ್ತು ಫಸ್ಟ್ ಸ್ಟೆಪ್ ಟ್ರಸ್ಟ್ ಸ್ಥಾಪಕಿ ಅಕ್ಷತಾ ರಾವ್ ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಗಣಿತನಗರದ ಪ್ರಾಂಶುಪಾಲ ದಿನೇಶ್ ಕೊಡವೂರು ಜಿಲ್ಲಾ ವಿಶೇಷ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಸಂಘದ ಅಧ್ಯಕ್ಷ ರವೀಂದ್ರ ಎಚ್ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಸಂಘ, ಬೆಂಗಳೂರು ಇದರ ಅಧ್ಯಕ್ಷ ಕಾಂತಿ ಹರೀಶ್ ಸಂಘದ ಗೌರವಾಧ್ಯಕ್ಷ ಅಗ್ನೆಸ್ ಕುಂದರ್ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಸುರೇಶ್ ತಲ್ಲೂರು,, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿ ಸಂಧ್ಯಾ ರಮೇಶ್ ಉಡುಪಿಯ ಉದ್ಯಮಿ ದಿನೇಶ್ ಅಮೀನ್ ಉಪಸ್ಥಿತರಿದ್ದರು.
ಜಿಲ್ಲೆಯ 15 ವಿಶೇಷ ಶಾಲೆಗಳ ವಿಶೇಷ ಮಕ್ಕಳ ಪ್ರತಿಭಾ ಪ್ರದರ್ಶನ ಇದೇ ಸಂದರ್ಭದಲ್ಲಿ ನಡೆಯಿತು. ವಿಶೇಷ ಮಕ್ಕಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. 350 ಕ್ಕೂ ಮಿಕ್ಕಿ ತಯಾರಿಸಿದ ರಾಖಿ ಮತ್ತು ಕೈಬ್ಯಾಂಡ್ಗಳನ್ನು ನಿರ್ಮಿಸಿದ ವಿಶೇಷ ಮಗು ಚೈತ್ರಾಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರದರ್ಶನ ನೀಡಿದ ಎಲ್ಲಾ ಮಕ್ಕಳಿಗೂ ಉಡುಗೊರೆಗಳನ್ನು ವಿತರಿಸಲಾಯಿತು.