ಮಂಗಳೂರು, ಜ. 31 (DaijiworldNews/TA): ಪಿಲಿಕುಳದ ಗಾಲ್ಫ್ ಕ್ಲಬ್ನಲ್ಲಿ ಆಯೋಜಿಸಲಾಗಿರುವ (ಪ್ರೊಫೆಶನಲ್ ಅಮೆಚೂರ್) ಗಾಲ್ಫ್ ಟೂರ್ನಮೆಂಟ್ಗಾಗಿ ಮಂಗಳೂರಿಗೆ ದೇಶದ ವಿವಿಧ ಭಾಗಗಳಿಂದ ವಿಶ್ವದರ್ಜೆಯ ವೃತ್ತಿಪರ ಗಾಲ್ಫ್ ಆಟಗಾರರು ಆಗಮಿಸಿದ್ದಾರೆ ಎಂದು ಕ್ಲಬ್ನ ಕ್ಯಾಪ್ಟನ್ ಮನೋಜ್ ಕುಮಾರ್ ಶೆಟ್ಟಿ ತಿಳಿಸಿದರು.

ಪಿಲಿಕುಳ ಗಾಲ್ಫ್ ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವದರ್ಜೆಯ ವೃತ್ತಿಪರ ಆಟಗಾರರಾದ ಅಮನ್ ರಾಜ್, ಆರ್ಯನ್ ರೂಪ ಆನಂದ್, ದಿವ್ಯಾಂಶು ಬಜಾಜ್, ಧರ್ಮ, ಅಲಾಪ್ ಐ.ಎಲ್., ಯಶಸ್ ಚಂದ್ರ ಎಂ.ಎಸ್., ಉದಯನ್ ಮಾನೆ, ಖಾಲಿನ್ ಜೋಶಿ, ಸ್ನೇಹಾ ಸಿಂಗ್, ಅವನಿ ಪ್ರಶಾಂತ್, ಚಿಕ್ಕರಂಗಪ್ಪ ಎಸ್. ಮತ್ತು ಸಮರ್ಥ್ ದ್ವಿವೇದಿ ಮಂಗಳೂರಿನ ಗಾಲ್ಫ್ ಕ್ಲಬ್ಗೆ ಆಗಮಿಸುವ ಮೂಲಕ ಅಮೆಚೂರ್ ಆಟಗಾರರಿಗೆ ಹೊಸ ಹುರುಪು ದೊರಕಿದೆ. ವಿಶ್ವದರ್ಜೆಯ ಈಜುಕೊಳ, ಬ್ಯಾಡ್ಮಿಂಟನ್ ಕ್ರೀಡಾಂಗಣದ ಜತೆಗೆ ಇದೀಗ ಮಂಗಳೂರಿನಲ್ಲಿ ವಿಶ್ವದರ್ಜೆಯ ಫ್ಲೆಡ್ಲೈಟ್ ವ್ಯವಸ್ಥೆಯ ಗಾಲ್ಫ್ ಕ್ಲಬ್ ಮೂಲಕ ಮಂಗಳೂರು ಕ್ರೀಡಾ ಕ್ಷೇತ್ರದಲ್ಲಿಯೂ ದಾಪುಗಲಿಡುತ್ತಿದೆ.
ಪಿಲಿಕುಳ ಗಾಲ್ಫ್ ಕ್ಲಬ್ನ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ನಿರ್ದೇಶನದ ಮೇರೆಗೆ ಕರಾವಳಿ ಉತ್ಸವದ ಸಮಾರೋಪದ ಭಾಗವಾಗಿ ಶನಿವಾರ ಹೊನಲು ಬೆಳಕಿನ ಗಾಲ್ಫ್ ಪಂದ್ಯಾಟ ನಡೆಯಲಿದೆ. ಗಾಲ್ಫ್ ಕೋರ್ಸ್ನಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜಾ ಮತ್ತು ಫ್ಯಾಮಿಲಿ ಪ್ರಾಯೋಜಿತ ಗಾಲ್ಫ್ ಅಕಾಡೆಮಿ ನಿರ್ಮಾಣವಾಗುತ್ತಿದ್ದು ಮಾರ್ಚ್ 31ಕ್ಕೆ ಪೂರ್ಣಗೊಳ್ಳಲಿದೆ. ಗಾಲ್ಫ್ ಕ್ರೀಡೆಯ ತರಬೇತಿಗಾಗಿ ದೇಶದ ವಿವಿಧ ಭಾಗಗಳ ನುರಿತ ಗಾಲ್ಫ್ ಅಕಾಡೆಮಿಗಳ ಪ್ರಮುಖರ ಸಹಕಾರದಲ್ಲಿ ರೂಪುರೇಷೆಯನ್ನು ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ.
ಇದು ಕೇವಲ ತರಬೇತಿ ಕೇಂದ್ರ ಮಾತ್ರ ಆಗಿರದೆ, ಗಾಲ್ಫ್ ಎಕ್ಸೆಲೆನ್ಸ್ ಅಕಾಡೆಮಿಯಾಗಿ ರೂಪುಗೊಳ್ಳಲಿದೆ ಎಂದು ಅವರು ತಿಳಿಸಿದರು. ಗೋಷ್ಟಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ ಗಾಲ್ಫ್ ಆಟಗಾರರ ಜತೆಗೆ ಗಿರೀಶ್ ರಾವ್, ನಿತಿನ್ ಶೆಟ್ಟಿ, ಗೌತಮ್ ಪಡಿವಾಳ ಮೊದಲಾದವರು ಉಪಸ್ಥಿತರಿದ್ದರು.