ಉಳ್ಳಾಲ, ಜ. 31 (DaijiworldNews/TA): ಕೇರಳ ಗಡಿಭಾಗದಲ್ಲಿ ಸ್ಥಾಪಿತವಾಗಿ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯಕ್ಷಗಾನ ಬೊಂಬೆಯಾಟ ಕಲೆ ಇಂದಿನ ಕಾಲಘಟ್ಟದಲ್ಲಿ ತೀವ್ರ ಸಂಕಷ್ಟದ ಹಂತದಲ್ಲಿದೆ. ಸೂಕ್ತ ಪ್ರೋತ್ಸಾಹದ ಕೊರತೆಯಿಂದ ಮುಂದಿನ ದಿನಗಳಲ್ಲಿ ಈ ಅಪರೂಪದ ಪರಂಪರೆಯು ನಿಲ್ಲುವ ಭೀತಿ ಎದುರಾಗಿದೆ ಎಂದು ಕಾಸರಗೋಡು ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ. ರಮೇಶ್ ಆತಂಕ ವ್ಯಕ್ತಪಡಿಸಿದರು.

ಅವರು ತೊಕ್ಕೊಟ್ಟು ಸೇವಾಸೌಧ ಕಚೇರಿಯಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಲಾಸಕ್ತರು, ಯಕ್ಷರಸಿಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾಸರಗೋಡು ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ತಂಡವು ಪಾಕಿಸ್ತಾನ, ಚೀನಾ, ಫ್ರಾನ್ಸ್ ಸೇರಿದಂತೆ ಹಲವು ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ನೀಡಿದೆ. ಇಂತಹ ವಿಶ್ವಪ್ರಸಿದ್ಧ ಕಲೆಯ ಉಳಿವಿಗಾಗಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ “ಗಣ್ಯರೆಡೆಗೆ ಬೊಂಬೆ ನಡಿಗೆ” ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಜಾಗೃತಿ ಕಾರ್ಯಕ್ರಮಕ್ಕೆ ಫೆಬ್ರವರಿ 2ರಂದು ಧರ್ಮಸ್ಥಳದಲ್ಲಿ ಅಧಿಕೃತ ಚಾಲನೆ ನೀಡಲಾಗುವುದು. ಯಕ್ಷಗಾನ ಬೊಂಬೆಯಾಟಕ್ಕೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ಮತ್ತು ಬೆಂಬಲ ಅಗತ್ಯವಿದ್ದು, ಕಲಾಸಕ್ತರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರಾಧಾಕೃಷ್ಣ ಉಳಿಯತಡ್ಕ, ಶಿವರಾಮ ಕಾಸರಗೋಡು, ಕೆ. ಜಗದೀಶ್ ಕೂಡ್ಲು, ಎಸ್.ಎಲ್. ಭಾರದ್ವಾಜ್ ಹಾಗೂ ಅಚಲ್ ಭಟ್ ಉಪಸ್ಥಿತರಿದ್ದರು.