ಮಂಗಳೂರು, ಜ. 30 (DaijiworldNews/AA): ಗಲ್ಫ್ ರಾಷ್ಟ್ರಗಳು ಮತ್ತು ಕರಾವಳಿ ಕರ್ನಾಟಕದ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯು ದೋಹಾ ಮತ್ತು ಮಂಗಳೂರು ನಡುವಿನ ನೇರ ಅಂತರಾಷ್ಟ್ರೀಯ ವಿಮಾನ ಸೇವೆಯ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಹೊಸ ದೋಹಾ-ಮಂಗಳೂರು-ದೋಹಾ ವಿಮಾನ ಸೇವೆಯು ಏಪ್ರಿಲ್ 1, 2026 ರಿಂದ ಆರಂಭವಾಗಲಿದೆ. ಈ ಹೊಸ ಮಾರ್ಗವು ಕತಾರ್ ಮತ್ತು ಮಂಗಳೂರು ಭಾಗದೊಂದಿಗೆ ನಿಕಟ ಸಂಬಂಧ ಹೊಂದಿರುವ ಅನಿವಾಸಿ ಭಾರತೀಯರು, ಉದ್ಯಮಿಗಳು ಮತ್ತು ಕುಟುಂಬಗಳಿಗೆ ಹೆಚ್ಚಿನ ಅನುಕೂಲವನ್ನು ನೀಡುವ ನಿರೀಕ್ಷೆಯಿದೆ.
ವೇಳಾಪಟ್ಟಿಯ ಪ್ರಕಾರ, ದೋಹಾದಿಂದ ಮಂಗಳೂರಿಗೆ ವಿಮಾನಗಳು ಬುಧವಾರ, ಶುಕ್ರವಾರ ಮತ್ತು ಭಾನುವಾರಗಳಂದು ಸಂಚರಿಸಲಿವೆ. ಈ ವಿಮಾನವು ದೋಹಾದಿಂದ ಮಧ್ಯರಾತ್ರಿ 12.30ಕ್ಕೆ ಹೊರಟು, ಮಂಗಳೂರಿಗೆ ಬೆಳಗ್ಗೆ 7.15ಕ್ಕೆ ತಲುಪಲಿದೆ.
ಮಂಗಳೂರಿನಿಂದ ದೋಹಾಗೆ ವಿಮಾನಗಳು ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಕಾರ್ಯಾಚರಣೆ ನಡೆಸಲಿವೆ. ಮಂಗಳೂರಿನಿಂದ ರಾತ್ರಿ 10.00ಕ್ಕೆ ಹೊರಡುವ ವಿಮಾನವು ದೋಹಾವನ್ನು ರಾತ್ರಿ 11.30ಕ್ಕೆ ತಲುಪಲಿದೆ.
ಈ ಸೇವೆಯ ಆರಂಭದಿಂದ ಪ್ರಯಾಣದ ಸೌಲಭ್ಯ ಹೆಚ್ಚಾಗಲಿದ್ದು, ಪ್ರಯಾಣದ ಸಮಯ ಉಳಿಯಲಿದೆ. ಜೊತೆಗೆ ಈ ಎರಡು ನಗರಗಳ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ. ದೀರ್ಘಕಾಲದಿಂದ ಹೆಚ್ಚಿನ ನೇರ ವಿಮಾನ ಸೌಲಭ್ಯಕ್ಕಾಗಿ ಒತ್ತಾಯಿಸುತ್ತಿದ್ದ ಕತಾರ್ನಲ್ಲಿರುವ ಮಂಗಳೂರು ಮೂಲದ ಅನಿವಾಸಿಗಳು ಈ ಹೊಸ ಮಾರ್ಗವನ್ನು ಸ್ವಾಗತಿಸಿದ್ದಾರೆ.