ಮಂಗಳೂರು, ಜ. 30 (DaijiworldNews/AA): ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್ ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ದಸ್ತಗಿರಿ ಮಾಡಿದ್ದು, ಆರೋಪಿಯಿಂದ 46.28 ಗ್ರಾಂ ತೂಕದ 6,47,920 ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ.

ಬಂಧಿತ ಅಂತರ್ ಜಿಲ್ಲಾ ಕಳ್ಳನನ್ನು ಮಡಿಕೇರಿಯ ತ್ಯಾಗರಾಜ್ ಕಾಲೋನಿ ನಿವಾಸಿ ಮಹಮ್ಮದ್ ಇಮ್ರಾನ್ ಎನ್.ಎಮ್(44) ಎಂದು ಗುರುತಿಸಲಾಗಿದೆ.
ಆರೋಪಿಯು ಬಸ್ ನಿಲ್ದಾಣಗಳಲ್ಲಿ ಒಟ್ಟು 11 ಬ್ಯಾಗ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಆರೋಪಿ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಯನ್ನು ಜ. 28 ರಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ನ ಬಳಿಯಲ್ಲಿ ದಸ್ತಗಿರಿ ಮಾಡಲಾಯಿತು. ಆತನಿಂತ ಒಟ್ಟು 6,47,920 ರೂ. ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆಗಳನ್ನು 5,000 ರೂ. ನಗದು ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಜ.29 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಜ.23 ರಂದು ಸಂಜೆ ಇಬ್ಬರು ಮಹಿಳೆಯರು ಮತ್ತು ಹಿರಿಯ ನಾಗರಿಕರು ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ 20,000 ರೂ. ನಗದು ಹಣ ಇರುವ ಬ್ಯಾಗ್ ಕಳ್ಳತನವಾಗಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ:10/2026 ಕಲಂ: 303(2), BNS-2023 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿರುತ್ತದೆ.
ಬಂಧಿತ ಆರೋಪಿಯು ಬಸ್ ನಿಲ್ದಾಣಗಳಲ್ಲಿ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್ ಗಳನ್ನು ಕಳ್ಳತನ ಮಾಡುವಾತನಾಗಿದ್ದು, ಈತನ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿತ ವಿರುದ್ಧ ದುದ್ದ ಪೊಲೀಸ್ ಠಾಣೆ, ಕೊಮನೂರು ಪೊಲೀಸ್ ಠಾಣೆ, ಹಾಸನ ಬಡಾವಣೆ ಪೊಲೀಸ್ ಠಾಣೆ, ಹಾಸನ ನಗರ ಪೊಲೀಸ್ ಠಾಣೆ, ಚೆನ್ನರಾಯಪಟ್ಟಣ ನಗರ ಠಾಣೆ, ಮೈಸೂರು ದೇವರಾಜ ನಗರ ಪೊಲೀಸ್ ಠಾಣೆಯಲ್ಲಿ ತಲಾ 1 ಬ್ಯಾಗ್ ಕಳ್ಳತನ ಪ್ರಕರಣಗಳು ದಾಖಲಗಿದ್ದು, ಹಾಸನ ಜಿಲ್ಲೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ- 1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ -2, ಹಾಸನ ಜಿಲ್ಲೆ ದುದ್ದ ಪೊಲೀಸ್ ಠಾಣೆಯಲ್ಲಿ-1 ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಇನ್ನು ಆರೋಪಿಯು ಹಾಸನ ಜಿಲ್ಲೆಯ ಮನೆಕಳವು ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ಬಳಿಕ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ನ್ಯಾಯಾಲಯವು ಆರೋಪಿ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು.
ಈ ಕಾರ್ಯಾಚರಣೆಯನ್ನು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್, ಪಿ.ಎಸ್.ಐ ಮತ್ತು ಸಿಬ್ಬಂದಿಗಳಾದ ಸುಜನ್, ವಾಸುದೇವ, ರವಿ ಲಮಾಣಿ, ಸಿದ್ದು, ಹರೀಶ್, ನಿತಿಶ್, ಗಾಲಿಬ್ ನಡೆಸಲಾಯಿತು.