ಬಂಟ್ವಾಳ, ಜ. 25 (DaijiworldNews/AA): ದೆಹಲಿಯಲ್ಲಿ ನಡೆಯುವ 75ನೇ ಗಣರಾಜ್ಯೋತ್ಸವದ ಕರ್ತವ್ಯಪಥಕ್ಕೆ ವಿಶೇಷ ಅತಿಥಿಯಾಗಿ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಅಮೃತ ಸಂಜೀವಿನಿ ಗ್ರಾ.ಪಂ.ಮಟ್ಟದ ಮಾದರಿ ಒಕ್ಕೂಟದ ಸದಸ್ಯೆ ಪ್ರೇಮ ಅವರು ಆಯ್ಕೆಯಾಗಿದ್ದಾರೆ.


2016ರಲ್ಲಿ ಸಿದ್ದಕಟ್ಟೆಯ ಪ್ರೇಮ ಅವರು ಕೃಷಿ ಹಾಗೂ ಹೈನುಗಾರಿಕೆಯನ್ನು ಜೀವನಾಧಾರ ಮಾಡಿಕೊಂಡು ಭ್ರಮರಿ ನವೋದಯ ಸ್ವಸಹಾಯ ಗುಂಪಿನ ಸದಸ್ಯೆಯಾಗಿ ಸಂಘಟಿತ ಚಳವಳಿಗೆ ಕಾಲಿಟ್ಟರು. ಆರಂಭದಲ್ಲೇ ಸಮಾಜಮುಖಿ ಚಟುವಟಿಕೆಗಳತ್ತ ಅವರ ಆಸಕ್ತಿ ಸ್ಪಷ್ಟವಾಗಿದ್ದು, 2018ರಲ್ಲಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ರಚನೆಯ ಸಮಯದಲ್ಲಿ ಅವರ ನಾಯಕತ್ವ ಗುಣಗಳು ಇನ್ನಷ್ಟು ಬೆಳಕಿಗೆ ಬಂದವು.
ಒಕ್ಕೂಟ ನಿರ್ಮಾಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರೇಮ ಅವರು, ಬಳಿಕ ಬಂಟ್ವಾಳ ತಾಲೂಕಿನ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 430 ಸ್ವಸಹಾಯ ಸಂಘಗಳನ್ನು ಸಂಜೀವಿನಿ ಒಕ್ಕೂಟಗಳಿಗೆ ಸೇರಿಸುವ ಮಹತ್ತರ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಕಾರ್ಯವನ್ನು ಅವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಜಿಲ್ಲಾ ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಆಲಿಯವರ ಮಾರ್ಗದರ್ಶನ ಮತ್ತು ಸಹಕಾರದಿಂದ, ಪ್ರೇಮ ಅವರು ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕುಮಟ್ಟದಲ್ಲಿ ಕಾರ್ಯನಿರ್ವಹಿಸಿದರು.
ಗ್ರಾಮೀಣ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮಹತ್ವ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಉದ್ದೇಶಗಳು, ಸಂಜೀವಿನಿ ಒಕ್ಕೂಟಗಳ ಮೂಲಕ ದೊರೆಯುವ ಸಬಲೀಕರಣದ ಅವಕಾಶಗಳ ಬಗ್ಗೆ ಪ್ರೇಮ ಅವರು ನಿರಂತರವಾಗಿ ಜಾಗೃತಿ ಮೂಡಿಸಿದರು. ಸಂಗಬೆಟ್ಟು ಆಸುಪಾಸಿನ ಒಕ್ಕೂಟಕ್ಕೆ ಸುಮಾರು 25 ಸಂಘಗಳನ್ನು ಸೇರಿಸುವಂತಹ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾದ ನಂತರ, ತಮ್ಮ ವ್ಯಾಪ್ತಿಯಲ್ಲಿರುವ ಅನೇಕ ಮಹಿಳೆಯರನ್ನು ಸ್ವಉದ್ಯೋಗದ ದಾರಿಗೆ ತಿರುಗಿಸುವಲ್ಲಿ ಪ್ರೇಮ ಅವರು ಪ್ರಮುಖ ಪಾತ್ರ ವಹಿಸಿದರು. ಸ್ವಉದ್ಯೋಗ ತರಬೇತಿ, ಆದಾಯ ಸೃಷ್ಟಿಯ ಮಾರ್ಗಗಳು, ಸಮುದಾಯ ಬಂಡವಾಳ ನಿಧಿ ಸಾಲಗಳು ಹಾಗೂ ಬ್ಯಾಂಕ್ ಸಾಲಗಳ ವ್ಯವಸ್ಥೆ ಮಾಡಿಕೊಡುವ ಮೂಲಕ ಅನೇಕ ಕುಟುಂಬಗಳನ್ನು ಆರ್ಥಿಕವಾಗಿ ಬಲಪಡಿಸಿದ್ದಾರೆ. ಸಿದ್ದಕಟ್ಟೆ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮೂಲಕ ಸಿದ್ದಕಟ್ಟೆ ಮತ್ತು ಸಂಗಬೆಟ್ಟು ಪ್ರದೇಶದ ಮಹಿಳೆಯರಿಗೆ ಒಟ್ಟು ಒಂದು ಕೋಟಿಗೂ ಹೆಚ್ಚು ಮೊತ್ತದ ಸಾಲ ದೊರೆಯುವಂತೆ ಸೇತುವೆಯಾಗಿ ಕಾರ್ಯನಿರ್ವಹಿಸಿರುವುದು ಪ್ರೇಮ ಅವರ ಸಾಧನೆಯ ಮತ್ತೊಂದು ಮಹತ್ವದ ಅಂಶ.
ಇತರರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ಪ್ರೇಮ ಅವರು ಸ್ವತಃ ಸೋಪ್ ತಯಾರಿಕೆ, ಫಿನಾಯಿಲ್ ತಯಾರಿಕೆ, ಹೈನುಗಾರಿಕೆ, ಕೃಷಿ ಮುಂತಾದ ಉದ್ಯಮಗಳಲ್ಲಿ ತೊಡಗಿಸಿಕೊಂಡು ನಿರಂತರ ಆದಾಯ ಗಳಿಸುತ್ತಿದ್ದಾರೆ. ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡಿರುವ ಅವರು ಇಂದು ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
ಶ್ರಮ, ಸಂಕಲ್ಪ, ಸೇವಾಭಾವನೆ ಮತ್ತು ಸಬಲೀಕರಣದ ಪ್ರತೀಕವಾಗಿರುವ ಶ್ರೀಮತಿ ಪ್ರೇಮ ಅವರು, ಗ್ರಾಮೀಣ ಮಹಿಳೆಯರು ಸಾಧನೆ ಮಾಡಬಲ್ಲರು ಎಂಬುದಕ್ಕೆ ಉತ್ತಮ ಉದಾಹರಣೆ. ಕರ್ತವ್ಯಪಥದ ವಿಶೇಷ ಅತಿಥಿಯಾಗಿ ಆಯ್ಕೆಯಾಗಿದ್ದು, ಪತಿ ಗೋಪಾಲ ಪೂಜಾರಿಯವರ ಜೊತೆ ಶನಿವಾರ ಸಂಜೆ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ನಾನು ಈವರೆಗೆ ರೈಲಿನಲ್ಲಿ ಯೂ ಕುಳಿತವಳಲ್ಲ. ಇಲಾಖೆ ನನ್ನನ್ನು ಗುರುತಿಸಿ ದೆಹಲಿಗೆ ಅತಿಥಿಯಾಗಿ ಆಯ್ಕೆ ಮಾಡಿ ವಿಮಾನವೇರುವ ಭಾಗ್ಯ ಒದಗಿಸಿರುವುದು ಅತೀವ ಸಂತಸ ತಂದಿದೆ ಎಂದು ಪ್ರೇಮ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.