ಕಡಬ, ಜ. 24 (DaijiworldNews/AA): ಬಾಲಕನೋರ್ವ ತನ್ನ ತಂದೆಗೆ ಚಾಕು ಇರಿದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಪಾದೆಯಲ್ಲಿ ಶನಿವಾರ ಸಂಜೆ ನಡೆದಿದೆ.



ಮೃತನನ್ನು ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಎಂಬುವವರ ಪುತ್ರ ಮೋಕ್ಷ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ತಂದೆಯೊಂದಿಗೆ ಜಗಳವಾಡಿದ ಮೋಕ್ಷ, ತಂದೆಗೆ ಚಾಕು ಇರಿದಿದ್ದಾನೆ. ತದನಂತರ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ಕೇರಳದವರಾದ ವಸಂತ ಅಮೀನ್ ಅವರು ರಾಮಕುಂಜದ ಪಾದೆಯಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಸಿ ಮಗನೊಂದಿಗೆ ವಾಸವಾಗಿದ್ದರು. ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದನು. ಘಟನೆಯ ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.