ಉಡುಪಿ, ಜ. 24 (DaijiworldNews/AA): ಬಸ್ ಸಮಯದ ವಿಚಾರವಾಗಿ ಬಸ್ ಸಿಬ್ಬಂದಿಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮೊದಲ ಪ್ರಕರಣದಲ್ಲಿ ನವದುರ್ಗಾ ಬಸ್ (KA-20 AC-3467) ಚಾಲಕರಾದ ರಿಯಾಜ್ (41) ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ರಿಯಾಜ್ ಅವರು ಪ್ರಸ್ತುತ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನವರಿ 23ರಂದು ಸಂಜೆ ಸುಮಾರು 5.00 ಗಂಟೆಗೆ ರಿಯಾಜ್ ಅವರು ಸರ್ವಿಸ್ ಬಸ್ ನಿಲ್ದಾಣದಲ್ಲಿದ್ದಾಗ, ಸೆಲಿನಾ ಬಸ್ (KA-20 AC-1097) ಚಾಲಕ ಸದ್ದಾಂ ಎಂಬಾತನೊಂದಿಗೆ ಬಸ್ ಸಮಯದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ಸದ್ದಾಂ ಅಶ್ಲೀಲ ಪದಗಳಿಂದ ನಿಂದಿಸಿ, ಸ್ಕ್ರೂಡ್ರೈವರ್ನಿಂದ ರಿಯಾಜ್ ಅವರ ಎಡಗಣ್ಣಿನ ಬಳಿ ಇರಿದಿದ್ದಾನೆ ಎನ್ನಲಾಗಿದೆ.
ರಿಯಾಜ್ ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆರೋಪಿಯು ಬೆನ್ನಟ್ಟಿ ತಡೆದು ನಿಲ್ಲಿಸಿ, ಕೊಲೆ ಮಾಡುವ ಉದ್ದೇಶದಿಂದ ಮತ್ತೆ ಸ್ಕ್ರೂಡ್ರೈವರ್ನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ. ಅಲ್ಲದೆ, "ಮಂಗಳೂರಿಗೆ ಬಾ, ಅಲ್ಲಿ ನಿನ್ನನ್ನು ಮುಗಿಸುತ್ತೇನೆ" ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎರಡನೇ ಪ್ರಕರಣವು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸ್ ಉಪನಿರೀಕ್ಷಕ ಭರತೇಶ್ ಕಂಕನವಾಡಿ (43) ಅವರು ದೂರು ದಾಖಲಿಸಿದ್ದಾರೆ.
ಜನವರಿ 23ರಂದು ಬೆಳಗ್ಗೆ 11.00 ಗಂಟೆ ಸುಮಾರಿಗೆ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಸಿಬ್ಬಂದಿಗಳ ನಡುವೆ ಜಗಳ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಈ ವೇಳೆ ಸೀಮಾ ಬಸ್ (KA-20 B-4215) ಚಾಲಕ ವಿಖ್ಯಾತ್ ಮತ್ತು ನಿರ್ವಾಹಕ ಶರಣ್, ಹಾಗೂ ತನ್ವೀರ್ ಬಸ್ (KA-20 B-5448) ನಿರ್ವಾಹಕ ಹೇಮಂತ್ ಎಂಬುವವರು ಸಮಯದ ವಿಚಾರವಾಗಿ ಪರಸ್ಪರ ಬೈದಾಡುತ್ತಾ, ಹೊಡೆದಾಟದಲ್ಲಿ ತೊಡಗಿದ್ದರು.
ಪೊಲೀಸರು ಎಚ್ಚರಿಕೆ ನೀಡಿದರೂ ಲೆಕ್ಕಿಸದೆ, ಸಾರ್ವಜನಿಕ ಸ್ಥಳದಲ್ಲಿ ಪ್ರಯಾಣಿಕರಿಗೆ ಭಯ ಮತ್ತು ತೊಂದರೆ ಉಂಟುಮಾಡುವಂತೆ ವರ್ತಿಸಿದ ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.