ಮಂಗಳೂರು, ಜ. 21 (DaijiworldNews/AA): ಆನ್ಲೈನ್ ಬ್ಲ್ಯಾಕ್ಮೇಲ್ ಮತ್ತು ಸುಲಿಗೆಗಾಗಿ ಹೆಚ್ಚಾಗಿ ಬಳಕೆಯಾಗುತ್ತಿರುವ 'ಮಿಡ್ನೈಟ್ ಚಾಟ್' ಆ್ಯಪ್ಗಳ ಬಲೆಗೆ ಬೀಳದಂತೆ ಮಂಗಳೂರು ನಗರ ಪೊಲೀಸರು ಯುವಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಮಹಿಳೆಯರ ಅಥವಾ ಎಐ ಮೂಲಕ ಸೃಷ್ಟಿಸಿದ ಪ್ರೊಫೈಲ್ಗಳ ಮೂಲಕ ಸ್ನೇಹದ ಆಮಿಷವೊಡ್ಡಿ ಯುವಕರನ್ನು ಸೆಳೆಯಲಾಗುತ್ತಿದೆ. ಹೀಗೆ ಯುವಕರ ನಂಬಿಕೆ ಗಳಿಸಿ, ನಂತರ ಅವರ ವೈಯಕ್ತಿಕ ವಿವರಗಳು ಮತ್ತು ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುವಂತೆ ಪ್ರಚೋದಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಭಾಷಣೆಗಳು ಕ್ರಮೇಣ ವಿಡಿಯೋ ಅಥವಾ ವಾಯ್ಸ್ ಕಾಲ್ಗಳಿಗೆ ತಿರುಗುತ್ತವೆ. ಈ ಸಂದರ್ಭದಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ ಸಂತ್ರಸ್ತರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳಲಾಗುತ್ತದೆ. ನಂತರ, ದೊಡ್ಡ ಮೊತ್ತದ ಹಣವನ್ನು ನೀಡದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಲಾಗುತ್ತದೆ. ಮಾನಹಾನಿಯ ಭೀತಿ ಮತ್ತು ಮುಜುಗರದಿಂದಾಗಿ ಈಗಾಗಲೇ ಹಲವಾರು ಯುವಕರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಸಾಮಾಜಕ್ಕೆ ಹೆದರಿ ಅನೇಕ ಪ್ರಕರಣಗಳು ಇಂದಿಗೂ ದಾಖಲಾಗದೆ ಉಳಿದಿವೆ ಎಂದು ಪೊಲೀಸರ ಮಾಹಿತಿಯ ನೀಡಿದ್ದಾರೆ.
ಮಂಗಳೂರು, ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂತಹ ಘಟನೆಗಳು ವರದಿಯಾಗಿವೆ. ಡೇಟಿಂಗ್ ಮತ್ತು ಹೂಡಿಕೆಯ ಆಮಿಷವೊಡ್ಡಿ ಆರ್ಥಿಕ ವಂಚನೆ ಎಸಗಲಾಗುತ್ತಿದೆ. ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಯುವಜನತೆ ಜಾಗರೂಕರಾಗಿರಬೇಕು. ಅಪರಿಚಿತರೊಂದಿಗೆ ಆ್ಯಪ್ಗಳ ಮೂಲಕ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಬೆಳೆಸಬೇಡಿ. ಇಂತಹ ವಂಚನೆಗಳ ಹಿಂದೆ ಸಂಘಟಿತ ಜಾಲಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.