ಕಾಸರಗೋಡು, ಜ. 19 (DaijiworldNews/TA): ನಗರದ ಹಳೆಯ ಬಸ್ ನಿಲ್ದಾಣ ಸಮೀಪದಲ್ಲಿರುವ ಲೂಮ್ಸ್ ಬೇಕರಿಯಲ್ಲಿ ರವಿವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ.




ರಾತ್ರಿ ಸುಮಾರು 11 ಗಂಟೆ ವೇಳೆಗೆ ಬೇಕರಿಯಲ್ಲಿ ಇದ್ದ ಕೂಲ್ ಬಾರ್ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸೂಚನೆ ಪಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಶೀಘ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಅಗ್ನಿ ಅವಘಡದಿಂದ ಬೇಕರಿಯ ಒಳಸಾಮಗ್ರಿ ಹಾಗೂ ಉಪಕರಣಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, ನಷ್ಟದ ಪ್ರಮಾಣವನ್ನು ಇನ್ನೂ ಲೆಕ್ಕ ಹಾಕಲಾಗುತ್ತಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.