ಪುತ್ತೂರು, ಜ. 18 (DaijiworldNews/AA): ಪುತ್ತೂರು ನಗರದಿಂದ ಸುಮಾರು ಆರು ಕಿಲೋಮೀಟರ್ ದೂರದ ಉಪ್ಪಿನಂಗಡಿ ರಸ್ತೆಯ ಆನೆಮಜಲು ಎಂಬಲ್ಲಿ 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ನ್ಯಾಯಾಲಯ ಕಟ್ಟಡವು ಉದ್ಘಾಟನೆಗೆ ಸಿದ್ಧಗೊಂಡಿದೆ. ಜನವರಿ ಅಂತ್ಯದ ವೇಳೆಗೆ ಇದು ಲೋಕಾರ್ಪಣೆಯಾಗಲಿದ್ದು, ಶತಮಾನದಷ್ಟು ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಲಯಕ್ಕೆ ಇನ್ನು ಸುಸಜ್ಜಿತ ನೆಲೆ ಸಿಗಲಿದೆ.

ಪುತ್ತೂರಿನ ನ್ಯಾಯಾಲಯಗಳಿಗೆ 150 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಈ ನೂತನ ಕಟ್ಟಡದ ಉದ್ಘಾಟನೆಯು ಪುತ್ತೂರಿನ ನ್ಯಾಯಾಂಗ ವ್ಯವಸ್ಥೆಯ ವಿಕಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ.
ದಾಖಲೆಗಳ ಪ್ರಕಾರ, ಪುತ್ತೂರಿನಲ್ಲಿ ನ್ಯಾಯಾಲಯದ ಬಗ್ಗೆ ಮೊದಲ ಉಲ್ಲೇಖವು 1860ರ ನೋಂದಾಯಿತ ದಾಖಲೆಯೊಂದರಲ್ಲಿ ಕಂಡುಬರುತ್ತದೆ. ಇದರಲ್ಲಿ 'ಮುನ್ಸಿಫ್ ಕೋರ್ಟ್ಗೆ ಹೋಗುವ ರಸ್ತೆ'ಯ ಬಗ್ಗೆ ಉಲ್ಲೇಖವಿದ್ದು, ಇದು ನೆಲ್ಲಿಕಟ್ಟೆಯ ಅರಣ್ಯ ಇಲಾಖೆಯ ಕಚೇರಿ ಇರುವ ಜಾಗದಲ್ಲಿ ಅಂದು ನ್ಯಾಯಾಲಯವಿತ್ತು ಎಂಬುದಕ್ಕೆ ಪುಷ್ಟಿ ನೀಡುತ್ತದೆ.
1880ರಲ್ಲಿ ಪ್ರಸ್ತುತ ನ್ಯಾಯಾಲಯದ ಆವರಣದಲ್ಲಿ ಗೋಪುರವಿರುವ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿತ್ತು. 111 ವರ್ಷ ಹಳೆಯದಾದ ಆ ಕಟ್ಟಡವು ಆಗಸ್ಟ್ 26, 1989 ರಂದು ಕುಸಿದು ಬೀಳುತ್ತದೆ. 1991ರಿಂದ ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಅಂದರೆ ಐದು ವರ್ಷಗಳ ಕಾಲ ನ್ಯಾಯಾಲಯದ ಕಲಾಪಗಳು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿಯ ಬಾಡಿಗೆ ಕಟ್ಟಡದಲ್ಲಿ ನಡೆದವು. 1996ರಲ್ಲಿ ಈಗಿನ ಕಟ್ಟಡ ಉದ್ಘಾಟನೆಗೊಂಡಿತು. ಪ್ರಸ್ತುತ ಇಲ್ಲಿ ಆರು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
ನೂತನ ನ್ಯಾಯಾಲಯ ಸಂಕೀರ್ಣದ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಮೊದಲ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಮೊದಲ ಎರಡು ಮಹಡಿಗಳ ನಿರ್ಮಾಣ 2021ರಲ್ಲಿ ಪೂರ್ಣಗೊಂಡಿತು. ಇದರೊಂದಿಗೆ 3 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಮಹಡಿಗಳ ವಕೀಲರ ಸಂಘದ ಕಟ್ಟಡವನ್ನು ನಿರ್ಮಿಸಲಾಯಿತು. 2021ರ ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ನ ಅಂದಿನ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಎರಡನೇ ಹಂತಕ್ಕೆ ಶಂಕುಸ್ಥಾಪನೆ ಮಾಡಿದ್ದರು. 26 ಕೋಟಿ ರೂ. ವೆಚ್ಚದಲ್ಲಿ ಉಳಿದ ಎರಡು ಮಹಡಿಗಳು, ನ್ಯಾಯಾಧೀಶರ ವಸತಿ ಗೃಹಗಳು ಮತ್ತು ಸುಸಜ್ಜಿತ ರಸ್ತೆಯನ್ನು ಎರಡನೇ ಹಂತದಲ್ಲಿ ನಿರ್ಮಿಸಲಾಗಿದೆ.
ಒಟ್ಟು 51 ಕೋಟಿ ರೂಪಾಯಿ ವೆಚ್ಚದ ಈ ಸುಸಜ್ಜಿತ ನಾಲ್ಕು ಮಹಡಿಗಳ ನ್ಯಾಯಾಲಯ ಸಂಕೀರ್ಣವು ಜನವರಿ 31 ರಂದು ಉದ್ಘಾಟನೆಯಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಈ ಮೂಲಕ ಪುತ್ತೂರಿನ ದೀರ್ಘಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ.