ಉಡುಪಿ, ಜ.18 (DaijiworldNews/TA): ಗೋವಿನಿಂದ ಅನೇಕ ಉಪಕಾರಗಳಿವೆ. ಗೋವು ತಾನು ಅಸಾರ ಭಾಗವನ್ನು ಸ್ವೀಕಾರ ಮಾಡಿ ಸಾರವಾದ ಬೆಣ್ಣೆ, ತುಪ್ಪ, ಹಾಲನ್ನು ನಮಗೆ ನೀಡುವ ಉಪಕಾರಿ ಪ್ರಾಣಿ. ಹಾಗಾಗಿ ಗೋವಿಗೂ ಸೂಕ್ತ ನ್ಯಾಯ ಸಿಗಬೇಕು ಎಂದು ಉಡುಪಿಯಲ್ಲಿ ಪಲಿಮಾರು ಸ್ವಾಮೀಜಿ ತಿಳಿಸಿದರು. ಉಡುಪಿ ಕಡಗೋಲು ಕೃಷ್ಣ ನಗರಿಯಲ್ಲಿ ಪರ್ಯಾಯ ಮಹೋತ್ಸವದ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಉಡುಪಿ ಕಡಗೋಲು ಕೃಷ್ಣ ನಗರಿಯಲ್ಲಿ ಪರ್ಯಾಯ ಮಹೋತ್ಸವದ ಪರ್ಯಾಯ ದರ್ಬಾರ್ ಬೆಳಿಗ್ಗೆ 6.15ಕ್ಕೆ ರಾಜಾಂಗಣದಲ್ಲಿ ನಡೆಯಿತು. ಬೆಳಿಗ್ಗೆ 05.15ಕ್ಕೆ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣ ದರ್ಶನ ಮಾಡಿದ ವೇದವರ್ಧನ ತೀರ್ಥರು ಬಳಿಕ ಚಂದ್ರಮೌಳೀಶ್ವರ ಅನಂತೇಶ್ವರ ದರ್ಶನ ಪಡೆದ ಸ್ವಾಮಿಗಳು ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಅಷ್ಟ ಮಠಾಧೀಶರಾದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ, ಸೋದೆ ಮಠದ ವಿಶ್ವವಲ್ಲಭ ತೀರ್ಥ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ, ಕೃಷ್ಣಾ ಪುರ ಮಠದ ವಿದ್ಯಾಸಾಗರ ತೀರ್ಥ, ಅದಮಾರು ಮಠದ ಕಿರಿಯ ಯತಿ ಈಶಪ್ರಿಯ, ಪಲಿಮಾರು ಮಠದ ಹಿರಿಯ ಯತಿ ವಿದ್ಯಾದೀಶ ತೀರ್ಥ, ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥಗಳು ಭಾಗಿಯಾದರೆ ಪರ್ಯಾಯ ದರ್ಬಾರ್ ವೇಳೇ ತಿರುಪತಿ ತಿರುಮಲ ಪ್ರಸಾದವನ್ನು ಪರ್ಯಾಯ ಯತಿಗಳಿಗೆ ನೀಡುವುದರೊಂದಿಗೆ ಸಕಲ ಗೌರವವನ್ನು ಸಲ್ಲಿಸಿದರು.
ಶಿರೂರು ಮೂಲ ಮಠದ ಅರ್ಚಕರನ್ನು,ಉಡುಪಿ ಸಂಸ್ಕೃತ ಪಾಠ ಶಾಲೆಯ ವಿದ್ವಾಂಸರಾದ ಫ್ರೊಫೆಸರ್ ಲಕ್ಷ್ಮೀ ನಾರಾಯಣ ಭಟ್ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು. ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀ ಪಾದರು,ಪಲಿಮಾರು ಮಠದ ಹಿರಿಯ ಯತಿ ವಿದ್ಯಾದೀಶ ತೀರ್ಥ, ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.