ಮೂಡುಬಿದಿರೆ, ಜ. 18 (DaijiworldNews/AA): ದುಬೈನಲ್ಲಿ ಕೆಲಸ ಮಾಡಿ ಮರಳಿ ತಾಯ್ನಾಡಿನಲ್ಲಿ ಸ್ವಂತ ಹೊಟೇಲ್ ಉದ್ಯಮ ಆರಂಭಿಸುವ ಕನಸು ಹೊತ್ತಿದ್ದ ಯುವಕನೋರ್ವ ಶನಿವಾರ ಮಧ್ಯಾಹ್ನ ಮೂಡುಬಿದಿರೆಯ ನಾಗರಕಟ್ಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆ ಬಳಿ ಕಬ್ಬಿನ ಹಾಲಿನ ಅಂಗಡಿ ನಡೆಸುತ್ತಿರುವ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಎಂದು ಗುರುತಿಸಲಾಗಿದೆ.
ದುಬೈನಿಂದ ಹಿಂದಿರುಗಿದ್ದ ದೀಕ್ಷಿತ್, ನಾಗರಕಟ್ಟೆಯ ರಿಂಗ್ ರೋಡ್ ಬಳಿ ಹೊಟೇಲ್ ವ್ಯವಹಾರ ಪ್ರಾರಂಭಿಸಲು ಯೋಜಿಸಿದ್ದರು. ಹಾಗೂ ಹೊಟೇಲ್ ಆರಂಭಿಸಲು ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಲಗಿದ್ದ ಸಮಯದಲ್ಲಿ, ದೀಕ್ಷಿತ್ ಮನೆಯ ಕೋಣೆಯೊಂದರ ಕಿಟಕಿ ಸರಳಿಗೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಗಮನಿಸಿ: ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ರೀತಿಯ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ದಯವಿಟ್ಟು ತಜ್ಞರ ಸಹಾಯ ಪಡೆಯಿರಿ. ಸಹಾಯಕ್ಕಾಗಿ ಉಚಿತ ಸಹಾಯವಾಣಿ ಸಂಖ್ಯೆ 9152987821 ಗೆ ಕರೆ ಮಾಡಿ.