ಉಡುಪಿ, ಜ.18 (DaijiworldNews/TA): ಕೃಷ್ಣಮಠದಲ್ಲಿ ಶೀರೂರು ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, ಸಂಭ್ರಮ ಮುಗಿಲು ಮುಟ್ಟಿದೆ. ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದ್ದು, ಈ ಮೂಲಕ ಅತ್ಯಂತ ಎಳೆಯ ಪ್ರಾಯದ ಯತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಪೀಠಾರೋಹಣ ಮಾಡುವ ಮೂಲಕ ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣನ ಪೂಜಾಧಿಕಾರ ಪಡೆದರು. ಇನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ನಾಲ್ಕನೇ ಪರ್ಯಾಯ ಮಹೋತ್ಸವ ಅದ್ದೂರಿ ಸಮಾಪನವಾಯಿತು. ಇದು ಇದು ಶ್ರೀ ಕೃಷ್ಣ ಮಠದ ಇತಿಹಾಸದಲ್ಲಿ 253ನೇ ದ್ವೈವಾರ್ಷಿಕ ಪರ್ಯಾಯವಾಗಿದೆ. ಬೆಳಗಿನ ಜಾವ 1.30 ಕ್ಕೆ ಕಾಪು ತಾಲೂಕಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ನಡೆಯಿತು. ಪ್ರಾತಃಕಾಲ 3 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭವಾದವು. ನೂರಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು, ಟ್ಯಾಬ್ಲೋಗಳು, ಭಜನಾ ತಂಡಗಳು ಭಾಗಿಯಾದವು.
ಮೆರವಣಿಗೆಯ ಕೊನೆಯಲ್ಲಿ ಅಷ್ಟಮಠಾಧೀಶರ ಪಲ್ಲಕ್ಕಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಹೆಗಲುಕೊಟ್ಟು ಹೊರುವ ಮೇನೆಯಲ್ಲಿ ಪರ್ಯಾಯ ಮಠಾಧೀಶರು ಬಂದಿದ್ದರೆ ಮೆರವಣಿಗೆಯ ಕೊನೆಯಲ್ಲಿ ಅಷ್ಟಮಠಾಧೀಶರ ಪಲ್ಲಕ್ಕಿ ಮೆರವಣಿಗೆ ನಡೆದು ಬಂದವು. ಟ್ಯಾಬ್ಲೋಗಳ ಜೊತೆಗೆ ಕೀರ್ತಿ ಶೇಷ ಶ್ರೀ ಲಕ್ಷ್ಮಿ ವರ ತೀರ್ಥರ ಪ್ರತಿಕ್ರೃತಿ ಮೆರವಣಿಗೆ ಕೂಡ ಕಂಡುಬಂದಿತ್ತು. ಪ್ರಾತ:ಕಾಲ 5 .45 ಮಹೂರ್ತದಲ್ಲಿ ಅಕ್ಷಯ ಪಾತ್ರೆ ಹಸ್ತಾಂತರವಾಗಿದೆ. ರಾತ್ರಿ ಉಡುಪಿ ನಗರದ 15ಕ್ಕೂ ಅಧಿಕ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಅನೇಕ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಭಾಗಿಯಾಗಿದ್ದರು. ಇನ್ನು ಆದಿತ್ಯವಾರ ಬೆಳಿಗ್ಗೆ 10.30 ಕ್ಕೆ ಶ್ರೀ ಕೃಷ್ಣ ದೇವರಿಗೆ ವೇದವರ್ಧನ ತೀರ್ಥರಿಂದ ಮೊದಲ ಮಹಾಪೂಜೆ ನಡೆಯಲಿದೆ.