ಉಡುಪಿ, ಜ.17 (DaijiworldNews/TA): ಶೀರೂರು ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಸಜ್ಜಾಗಿ ನಿಂತಿರುವ ಕೃಷ್ಣನಗರಿಗೆ ಸ್ವರಾಂಜಲಿ ಕಾರ್ಯಕ್ರಮವು ಸಂಭ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದೆ. ಡಿಜಿಟಲ್ ಹಾಗೂ ಗೃಹೋಪಕರಣಗಳ ಮಳಿಗೆ 'ಹರ್ಷ' ಸ್ವರಾಂಜಲಿ ಕಾರ್ಯಕ್ರಮ ಆಯೋಜಿಸಿದ್ದು, ಜ.17ರ ಸಂಜೆ 6.30ಕ್ಕೆ ಪುರಭವನದಲ್ಲಿ ನಡೆಯಲಿದೆ. ಸ್ವರಾಂಜಲಿಯ ಉಚಿತ ಪ್ರವೇಶ ಪತ್ರವನ್ನು ಸಂಗೀತಾಸಕ್ತರು 'ಹರ್ಷ' ಉಡುಪಿ, ಮಂಗಳೂರು, ಸುರತ್ಕಲ್, ಬ್ರಹ್ಮಾವರ, ಕುಂದಾಪುರ ಹಾಗೂ ಪುತ್ತೂರು ಮಳಿಗೆಗಳಲ್ಲಿ ಪಡೆಯಬಹುದು.

ಸಪ್ತಸ್ವರದ ಸಮರ್ಪಣೆ 'ಸಾವನಿ ಶೆಂಡೆ' ಶಾಸ್ತ್ರೀಯಸಂಗೀತದಲ್ಲಿ ತಮ್ಮದೇ ಆದ ಛಾಪುಮೂಡಿಸಿರುವ 'ಸಾವನಿ ಶೆಂಡೆ' ಸಂಗೀತ ಕುಟುಂಬದಲ್ಲಿಯೇ ಜನಿಸಿದ್ದು ಚಿಕ್ಕ ವಯಸ್ಸಿನಿಂದಲೇ ಅಜ್ಜಿ ಕುಸುಮಾ ಶೆಂಡೆ ಅವರಿಂದ ಸಂಗೀತ ಕಲಿತಿದ್ದರು. 10ನೇ ವಯಸ್ಸಿನಲ್ಲಿ ಮೊದಲ ಕಾರ್ಯಕ್ರಮ ನೀಡಿದ ಅವರು ತುಮ್ಮಿ, ದಾದ್ರ, ಕಬ್ರಿ ಸಹಿತ ವಿವಿಧ ಪ್ರಕಾರದ ಗಾಯನ ಶೈಲಿ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಈ ಬಾರಿ 'ಹರ್ಷ ಸ್ವರಾಂಜಲಿ'ಯಲ್ಲಿ ಭಾಗವಹಿಸಲಿರುವ ಸಾವನಿ ಶೆಂಡೆ ಅವರಿಗೆ ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗ್ಡೆ ಹಾಗೂ ತಬಲಾದಲ್ಲಿ ಶ್ರೀಧರ್ಮಂಡ್ರೆ ಸಾಥ್ ನೀಡಲಿದ್ದಾರೆ. ಸ್ವರಾಂಜಲಿ 26 ವರ್ಷಗಳಿಂದ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕರ ಸಮ್ಮಿಲನದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. 2000ದಲ್ಲಿ ಶಶಿಧರ್ಕೋಟೆ ಹಾಗೂ ವೆಂಕಟೇಶ್ ಕುಮಾರ್ ಅವರೊಂದಿಗೆ ಆರಂಭಗೊಂಡಿತು.
2002ರಲ್ಲಿ ವೆಂಕಟೇಶ್ ಕುಮಾರ್ ಅವರೊಂದಿಗೆ ರಿಂಪಾ ಸಿವಾ ಇವರ ತಬಲಾ ವಾದನ, 2004ರಲ್ಲಿ ವೆಂಕಟೇಶ್ ಕುಮಾರ್ ಅವರೊಂದಿಗೆ ಟಿ.ಎನ್. ಶೇಷಗೋಪಾಲನ್ ಅವರ ಗಾಯನ, 2006ರಲ್ಲಿ ಮಲ್ಲಾಡಿ ಬ್ರದರ್ಸ್ ಹಾಗೂ ಅಶ್ವಿನಿ ಭಿಡೆ ದೇಶಪಾಂಡೆ, 2008ರಲ್ಲಿ ಗಾಯತ್ರಿ ಗಿರೀಶ್ ಹಾಗೂ ವೆಂಕಟೇಶ್ ಕುಮಾರ್ ಅವರ ಸಂಗೀತ, 2010ರಲ್ಲಿ ಪಂಣ ಗಣಪತಿ ಭಟ್ ಹಸಣಗಿಯವರ ಗಾಯನದೊಂದಿಗೆ ವೇಣು ವಾದಕ ಪ್ರವೀಣ್ ಗೋಡ್ತಿಂಡಿ ಹಾಗೂ ಸಿತಾರ್ಮಾಂತ್ರಿಕ ರಫೀಕ್ ಖಾನ್ ಅವರ ಜುಗಲ್ಬಂದಿ, 2012ರಲ್ಲಿ ವೆಂಕಟೇಶ್ ಕುಮಾರ್, 2014ರಲ್ಲಿ ಜಯತೀರ್ಥ ಮೇವುಂಡಿಯವರ ಗಾಯನ, 2016ರ ಪೇಜಾವರ ಶ್ರೀಗಳ ಪಂಚಮ ಪರ್ಯಾಯದಲ್ಲಿ ಕೌಶಿಕಿ ಚಕ್ರವರ್ತಿಯವರ ಹಿಂದೂಸ್ಥಾನಿ ಗಾಯನ, 2018ರಲ್ಲಿ ಮತ್ತೆ ವೆಂಕಟೇಶ್ ಕುಮಾರ್, 2020ರಲ್ಲಿ ಟಿ.ಎಂ. ಕೃಷ್ಣ ಅವರ ಹಾಡುಗಾರಿಕೆ, 2024ರಲ್ಲಿ ಇಶಾನ್ ಘೋಷ್ (ತಬಲಾ), ಪ್ರತೀಕ್ ಸಿಂಗ್ (ಗಾಯನ), ಮೆಹ್ರಾಬ್ ಅಲಿ ನಿಯಾಝಿ (ಸಿರ್ತಾ), ವನರಾಜ್ ಶಾಸ್ತ್ರಿ (ಸಾರಂಗಿ), ಎಸ್. ಆಕಾಶ್ (ಕೊಳಲು) ಸಮ್ಮಿಲನದ 'ಅರಾಜ್' ತಂಡದ ಸ್ವರಾಂಜಲಿ ನಡೆದಿತ್ತು, ಒಟ್ಟಾರೆ ಕಳೆದ 12 ಪರ್ಯಾಯಗಳಲ್ಲಿ ಸಂಗೀತಾಸಕ್ತರು ಸ್ವರಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.