ಉಡುಪಿ, ಜ. 16 (DaijiworldNews/AA): ಶಿರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಉಡುಪಿ ನಗರದಾದ್ಯಂತ ಅಳವಡಿಸಲಾಗಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರು ಗುರುವಾರ ಸಂಜೆ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರು, "ನಾನು ಮೊದಲ ಬಾರಿಗೆ ಪರ್ಯಾಯ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಸುಂದರವಾಗಿ ಕಂಗೊಳಿಸುತ್ತಿರುವ ಉಡುಪಿ ನಗರವನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ವ್ಯವಸ್ಥಿತ ಯೋಜನೆ ಮತ್ತು ದಕ್ಷತೆಯಿಂದ ಮಾಡಲಾಗಿರುವ ಈ ಸಿದ್ಧತೆಗಳು ಉಡುಪಿಯ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಿವೆ," ಎಂದು ಪ್ರಶಂಸಿದರು.
ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಯಶ್ಪಾಲ್ ಸುವರ್ಣ ಮಾತನಾಡಿ, "ಶಿರೂರು ಪರ್ಯಾಯದ ವೈಭವವನ್ನು ಹೆಚ್ಚಿಸಲು ಈ ಬಾರಿ ವಿಶೇಷ ದೀಪಾಲಂಕಾರಕ್ಕೆ ಆದ್ಯತೆ ನೀಡಲಾಗಿದೆ" ಎಂದರು. ಇದೇ ಸಂದರ್ಭದಲ್ಲಿ ನಗರದಾದ್ಯಂತ ದೀಪಾಲಂಕಾರದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕೃಷ್ಣಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಶಿರೂರು ಪರ್ಯಾಯಕ್ಕಾಗಿ ಉಡುಪಿ ನಗರವು ವಧುವಿನಂತೆ ಸಿಂಗಾರಗೊಂಡಿದೆ. ಹಬ್ಬದ ವಾತಾವರಣವನ್ನು ಮತ್ತಷ್ಟು ಮೆರುಗುಗೊಳಿಸಲು ಉಡುಪಿ ನಗರಸಭೆಯ ಆರ್ಥಿಕ ನೆರವಿನೊಂದಿಗೆ ಸುಮಾರು ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಗಂಗಾಧರ್, ಪೌರಾಯುಕ್ತ ಮಹಾಂತೇಶ್, ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಮಹಿಳಾ ಘಟಕದ ಪ್ರತಿನಿಧಿ ಪದ್ಮಲತಾ, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್, ವಿಷ್ಣುಮೂರ್ತಿ ಆಚಾರ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.