ಬಂಟ್ವಾಳ, ಜ. 14 (DaijiworldNews/TA): ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಇದೀಗ ಹೊಡೆದಾಟದವರೆಗೆ ತಲುಪಿದ್ದು ನಮಗೆ ರಕ್ಷಣೆ ಕೊಡಿ ಎಂದು ಕುಟುಂಬವೊಂದು ಸುದ್ದಿಗೋಷ್ಠಿಯ ಮೂಲಕ ಮನವಿ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಕುಟುಂಬದ ಪರವಾಗಿ ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಣ್ಣಂಗಳ ನಾಗರಾಜ ಮತ್ತು ಸುರೇಶ್ ನಾಯ್ಕ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಸುಣ್ಣಂಗಳ ನಾಗರಾಜ ಮತ್ತು ರಾಮಣ್ಣ ನಾಯ್ಕ ಕುಟುಂಬಗಳ ನಡುವೆ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಗಿರಿಧರ್ ನಾಯ್ಕ ಎಂಬವರು ಮಧ್ಯ ಪ್ರವೇಶ ಮಾಡಿ ಅಕ್ರಮ ಕೂಟ ಕಟ್ಟಿಕೊಂಡು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.ಮತ್ತು ಜೀವ ಬೆದರಿಕೆ ಕೂಡ ಒಡ್ಡಿದ್ದಾರೆ ಎಂದು ಅವರು ದೂರಿದ್ದಾರೆ.
ನಾಗರಾಜ ಅವರಿಗೆ ಸೇರಿದ ವರ್ಗ ಜಾಗದಲ್ಲಿ ರಾಮಣ್ಣ ನಾಯ್ಕ ಅವರಿಗೆ ಅಕ್ರಮವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾದ ಗಿರಿಧರ್ ನಾಯ್ಕ ಅವರು ಕೃಷಿ ನಾಶ ಮಾಡಿದ್ದಾರೆ ಮತ್ತು ಪ್ರಶ್ನೆ ಮಾಡಿದ ಕುಟುಂಬದ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಾಗದ ಮಾಲಕಿ ಕುಸುಮ ಹಾಗೂ ಮಕ್ಕಳಾದ ನಾಗರಾಜ, ಭಾರತಿ ಮತ್ತು ನೆರೆಯ ಮನೆಯವರಾದ ವನಿತಾ ಅವರು ಉಪಸ್ಥಿತರಿದ್ದರು.