ಮಂಗಳೂರು, ಜ. 14 (DaijiworldNews/TA): ಡಿಜಿಟಲ್ ಲೋಕದ ಅಂಗಳದಲ್ಲಿ ಒಂದು ಪುಟ್ಟ ಕನಸಾಗಿ ಮೊಳಕೆಯೊಡೆದ ದಿನ ಇಂದು ಸ್ಮರಣೀಯ ಕ್ಷಣವಾಗಿದೆ. ಸಣ್ಣ ಕಲ್ಪನೆಯೊಂದು ಕಾಲಕ್ರಮೇಣ ಬೃಹತ್ ಹೆಜ್ಜೆಯಾಗಿ ಬೆಳೆಯುತ್ತಾ, ಇದೀಗ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಅದ್ಭುತ ಪಯಣಕ್ಕೆ ಸಾಕ್ಷಿಯಾಗಿ ನಿಂತಿರುವುದು ದಾಯ್ಜಿವರ್ಲ್ಡ್. ಕಾಂ .



ಬೆರಳೆಣಿಕೆಯಷ್ಟು ಸುದ್ದಿ ಮಾಧ್ಯಮಗಳು ಹಾಗೂ ವೆಬ್ಸೈಟ್ಗಳು ಮಾತ್ರ ಅಸ್ತಿತ್ವದಲ್ಲಿದ್ದ ಸಮಯದಲ್ಲಿ, ಕೊಂಕಣಿ ಭಾಷೆಯಲ್ಲಿ ಆರಂಭವಾದ ‘daiji.bigstep.com’ ಇಂದು ಭಾಷೆಗಳ ಗಡಿಯನ್ನು ಮೀರಿ ಇಂಗ್ಲಿಷ್, ಕನ್ನಡ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ.
ಕೊಂಕಣಿ ಮಾತೃಭಾಷೆಯ ಪ್ರೋತ್ಸಾಹವೇ ಮೂಲ ಗುರಿಯಾಗಿದ್ದ ದೈಜಿವರ್ಲ್ಡ್.ಕಾಂ, ಡಿಜಿಟಲ್ ಜಗತ್ತಿನಲ್ಲಿ ಬೆಳವಣಿಗೆಯ ಬೀಜ ಬಿತ್ತಿಕೊಂಡು ಇಂದು 25ನೇ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದೆ. 2001ರ ಜನವರಿ 14ರಂದು, ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ‘Daijiworld.com ’ ಎಂಬ ಸರಳ ಹೆಸರಿನೊಂದಿಗೆ ಈ ವೆಬ್ಸೈಟ್ ತನ್ನ ಮೊದಲ ಹೆಜ್ಜೆ ಇಟ್ಟಿತು. ಮಾತೃಭಾಷೆಯ ಸೇವೆಯ ಉದ್ದೇಶದಿಂದ ಆರಂಭವಾದ ಈ ಪ್ರಯತ್ನ, ಶೀಘ್ರದಲ್ಲೇ ಕರಾವಳಿ ಕರ್ನಾಟಕದ ಜನತೆಗೆ ಅಗತ್ಯ ಮಾಹಿತಿ ನೀಡುವ ಪ್ರಮುಖ ವೇದಿಕೆಯಾಗಿ ರೂಪಾಂತರಗೊಂಡಿತು. ಎರಡು ವರ್ಷಗಳ ಅವಧಿಯೊಳಗೆ, ಕೊಂಕಣಿ ಸಾಹಿತ್ಯಕ್ಕೆ ಮೀಸಲಾಗಿದ್ದ ತಾಣವು ಸಂಪೂರ್ಣ ಸುದ್ದಿತಾಣವಾಗಿ ಬೆಳೆದಿತು. 2003ರಲ್ಲಿ ಇದಕ್ಕೆ ಅಧಿಕೃತವಾಗಿ Daijiworld.com ಎಂಬ ಹೊಸ ಹೆಸರಿಡಲಾಯಿತು. ಗುಣಮಟ್ಟದ ಸುದ್ದಿಗೆ ಹೆಚ್ಚುತ್ತಿರುವ ಓದುಗರ ಬೇಡಿಕೆಯನ್ನು ಗಮನಿಸಿ, 2007ರಲ್ಲಿ ದಾಯ್ಜಿವರ್ಲ್ಡ್ ಅನ್ನು ಖಾಸಗಿ ಲಿಮಿಟೆಡ್ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಇಂದು ದೈಜಿವರ್ಲ್ಡ್.ಕಾಂ ಜಗತ್ತಿನಾದ್ಯಂತ ಸುಮಾರು 20 ಲಕ್ಷಕ್ಕೂ ಅಧಿಕ ವಿಶಿಷ್ಟ ಓದುಗರಿಗೆ ಸೇವೆ ಸಲ್ಲಿಸುತ್ತಿದೆ. ಸ್ಥಳೀಯದಿಂದ ಹಿಡಿದು ಅಂತರರಾಷ್ಟ್ರೀಯ ಸುದ್ದಿವರೆಗೂ ವ್ಯಾಪಕ ಮಾಹಿತಿಯನ್ನು ಒದಗಿಸುತ್ತಿರುವ ಈ ವೇದಿಕೆ, ಜಾತಿ, ಧರ್ಮ, ಭಾಷೆ ಮತ್ತು ಭೌಗೋಳಿಕ ಅಂತರಗಳನ್ನು ಮರೆಸಿ ಓದುಗರನ್ನು ಒಂದೇ ಕುಟುಂಬದಂತೆ ಜೋಡಿಸಿದೆ. ಇದು “ವಸುದೈವ ಕುಟುಂಬಕಂ” ಎಂಬ ತತ್ವಕ್ಕೆ ಜೀವಂತ ಉದಾಹರಣೆ. ಯಶಸ್ಸಿನ ಕ್ಷಣಗಳಲ್ಲೂ, ಸಂಕಷ್ಟದ ದಿನಗಳಲ್ಲೂ ಓದುಗರು ನೀಡಿದ ಬೆಂಬಲವೇ ದಾಯ್ಜಿವರ್ಲ್ಡ್ ಬೆಳವಣಿಗೆಗೆ ನಿರಂತರ ಶಕ್ತಿಯಾಗಿದೆ.
ಸಮಾಜಸೇವೆಯ ಕ್ಷೇತ್ರದಲ್ಲಿಯೂ ಸಂಸ್ಥೆ ಗಮನಾರ್ಹ ಪಾತ್ರವಹಿಸಿದ್ದು, ದಾನಿಗಳನ್ನು ಅರ್ಹ ಫಲಾನುಭವಿಗಳೊಂದಿಗೆ ನೇರವಾಗಿ ಸಂಪರ್ಕಿಸುವ ಮೂಲಕ 30 ಕೋಟಿಗೂ ಅಧಿಕ ನೆರವನ್ನು ಒದಗಿಸಿದೆ. ದೈಜಿವರ್ಲ್ಡ್ನಲ್ಲಿ ಪ್ರಕಟವಾದ ಸುದ್ದಿ ವರದಿಗಳು, ಲೇಖನಗಳು ಹಾಗೂ ತನಿಖಾತ್ಮಕ ಕಥನಗಳು ಸರ್ಕಾರಿ ಅಧಿಕಾರಿಗಳು, ಇಲಾಖೆಗಳು ಮತ್ತು ರಾಜಕೀಯ ನಾಯಕತ್ವದ ಗಮನ ಸೆಳೆದು ಸಮಾಜದಲ್ಲಿ ಸ್ಪಷ್ಟ ಬದಲಾವಣೆ ತರಲು ಕಾರಣವಾಗಿವೆ. ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ Daijiworld.com ತಂಡದ ಸಮರ್ಪಣೆ ಮತ್ತು ನಿಷ್ಠೆಯ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ಮುಂದಿನ ತಲೆಮಾರಿನ ಪತ್ರಕರ್ತರನ್ನು ರೂಪಿಸುವ ಉದ್ದೇಶದಿಂದ, ದೈಜಿವರ್ಲ್ಡ್ ಮೀಡಿಯಾ ಪದವೀಧರರು ಮತ್ತು ಆಸಕ್ತ ಪತ್ರಕರ್ತರಿಗಾಗಿ ನಾಲ್ಕು ತಿಂಗಳ ವಿಶೇಷ ತರಬೇತಿ ಕಾರ್ಯಕ್ರಮವನ್ನು ಸಹ ಆರಂಭಿಸುತ್ತಿದೆ. ದೈಜಿವರ್ಲ್ಡ್ ತನ್ನ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಹೆಮ್ಮೆಯಿಂದ ಘೋಷಿಸಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಾಯಿತವಾಗಿರುವ ಈ ಸಂಸ್ಥೆಯ ಮೊದಲ ಕೊಂಕಣಿ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ.
Daijiworld.com ಆತ್ಮೀಯ ಓದುಗರೇ ಸಂಸ್ಥೆಯ ಅತಿದೊಡ್ಡ ಬಲ. ಪಯಣದಲ್ಲಿ ಎದುರಾದ ಪ್ರತಿಯೊಂದು ಸವಾಲು ಸಂಸ್ಥೆಗೆ ಪಾಠ ಕಲಿಸಿದೆ. ನಿಮ್ಮ ಮಾರ್ಗದರ್ಶನ, ಮೆಚ್ಚುಗೆ ಹಾಗೂ ರಚನಾತ್ಮಕ ಸಲಹೆಗಳು ಸಂಸ್ಥೆಯನ್ನು ಸದಾ ಉತ್ತಮಗೊಳಿಸಿವೆ. ನಮ್ಮ ಜಾಹೀರಾತುದಾರರು, ಪ್ರಾಯೋಜಕರು, ಮಾರುಕಟ್ಟೆ ಪಾಲುದಾರರು ಹಾಗೂ ಸಂಪಾದಕೀಯ ಮತ್ತು ಬೆಂಬಲ ತಂಡದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ನೀವುಗಳೇ ದೈಜಿವರ್ಲ್ಡ್ ಯಶಸ್ಸಿನ ನಿಜವಾದ ಬೆನ್ನೆಲುಬು. ಇದು ಕೇವಲ ಯಶಸ್ಸಿನ ಕಥೆಯಲ್ಲ, ಇದು ಸಹನೆ, ನಿರಂತರ ಪ್ರಯತ್ನದ ಕಥೆಯಾಗಿದೆ. ಪ್ರತಿಯೊಬ್ಬರ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಲು ಸಾಧ್ಯವಿಲ್ಲದಿದ್ದರೂ, ನಮ್ಮ ಎಲ್ಲಾ ಓದುಗರು, ಪೋಷಕರು, ಜಾಹೀರಾತುದಾರರು, ಪ್ರಾಯೋಜಕರು ಮತ್ತು ಬೆಂಬಲಿಗರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ.