ಉಳ್ಳಾಲ, ಜ. 14 (DaijiworldNews/TA): ಮಂಜನಾಡಿ ಕೊಪ್ಪಲಕೋಡಿಯಲ್ಲಿ ಗುಡ್ಡ ಕುಸಿದು ಮಕ್ಕಳು , ಅಜ್ಜಿ ಸಾವನ್ನಪ್ಪಿ ಎರಡು ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಪ್ರಕರಣಕ್ಕೆ ಸಂಬಂಧಿಸಿ ಅಶ್ವಿನಿ ಹಾಗೂ ಮನೆಮಂದಿ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದ ಭಾಗವಾಗಿ ಎನ್ಐಟಿಕೆ ಅಧಿಕಾರಿಗಳ ತಂಡದಿಂದ ತಾಂತ್ರಿಕ ತನಿಖೆ ಇಂದು ಆರಂಭವಾಗಿದೆ.


ಎನ್ ಐಟಿಕೆ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಇಬ್ಬರು ಅಸೋಸಿಯೇಟ್ ಪ್ರೊಫೆಸರ್ ಗಳು ಜಿಲ್ಲಾ ಪಂಚಾಯತ್ ಇಂಜಿನಿಯರುಗಳು ಹಾಗೂ ಮಂಜನಾಡಿ ಗ್ರಾ.ಪಂ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ವರದಿ ಪಡೆದುಕೊಂಡಿದ್ದಾರೆ. ಎನ್ ಐ ಟಿಕೆ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಗಳಾದ ಡಾ.ಪಳನಿಸಾಮಿ ಟಿ., ಡಾ. ಶ್ರೀವಲ್ಸಾ ಕೊಳಥಾಯರ್ ವರದಿ ಪಡೆದುಕೊಂಡಿದ್ದಾರೆ. ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದ ದುರಂತವು ಕೇವಲ ಪ್ರಕೃತಿ ವಿಕೋಪವಲ್ಲ. ಸ್ಥಳೀಯ ಗ್ರಾಮ ಪಂಚಾಯತ್ಗಳ ಆಡಳಿತ ವೈಫಲ್ಯದಿಂದ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಅಮಾಯಕ ಮಕ್ಕಳು ಹಾಗೂ ಅವರ ಅಜ್ಜಿ ಸಾವನ್ನಪ್ಪಿದ್ದು, ತಾಯಿ ಎರಡು ಕಾಲುಗಳನ್ನು ಮತ್ತು ಅಜ್ಜ ಒಂದು ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.
ಪ್ರಕರಣ ಸಂಬಂಧಿಸಿ ಅಪಾಯಕಾರಿ ಪ್ರದೇಶವೆಂದು ಗುರುತಿಸಲ್ಪಟ್ಟ 70 ಫೀಟ್ ಗುಡ್ಡದ ಬಳಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದವರು ಯಾರು? ಭೂ ಉಪಯೋಗ ನಿಯಮಗಳನ್ನು ಉಲ್ಲಂಘಿಸಿ ನಡೆದ ಚರಂಡಿ, ಮಣ್ಣು ತೆಗೆಯುವ ಹಾಗೂ ಭೂಮಿಯ ಸ್ವರೂಪ ಬದಲಾವಣೆ ಕಾರ್ಯಗಳ ಮೇಲೆ ಗ್ರಾಮ ಪಂಚಾಯತ್ ಏಕೆ ಕ್ರಮ ಕೈಗೊಂಡಿಲ್ಲ? ಮಣ್ಣು ಪರೀಕ್ಷೆ ಮಾಡದೆ 70 ಫೀಟ್ ಗುಡ್ಡ ಕಡಿದು ರಸ್ತೆ ನಿರ್ಮಾಣ ಹೇಗೆ ಸ್ಥಳೀಯ ಇಂಜಿನಿಯರಿಂಗ್ ವಿಭಾಗದ ಅನುಮತಿ ನೀಡಿದೆ ? ಸ್ಥಳೀಯವಾಗಿ ಅಪಾಯದ ಎಚ್ಚರಿಕೆಗಳು, ಮಳೆಗಾಲಕ್ಕೆ ಸಾರ್ವಜನಿಕರ ದೂರುಗಳಿದ್ದರೂ ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಯಾಕೆ ಮೌನ ವಹಿಸಿತ್ತು? ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಗಾರು ಪೂರ್ವ ಸಮೀಕ್ಷೆ ನಡೆಸಿತ್ತೇ? ನಡೆಸಿದ್ದರೆ ಅದರ ವರದಿ ಎಲ್ಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಕರ್ನಾಟಕ ಸರ್ಕಾರವು ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಎನ್ ಐಟಿಕೆಯನ್ನು ತನಿಖೆಗೆ ನಿಯೋಜಿಸಿದೆ.
ಮಕ್ಕಳ ಸಾವಿನ ಕುರಿತು ಸರ್ಕಾರದ ಆದೇಶದ ಮೇರೆಗೆ ಜಿಲ್ಲಾಡಳಿತವು ಉನ್ನತ ಮಟ್ಟದ ತನಿಖೆ ನಡೆಸುವ ಸಾಧ್ಯತೆಯಿದ್ದು, ನ್ಯಾಯ ಸಿಗಬೇಕಾದರೆ ವೈಜ್ಞಾನಿಕ ಸತ್ಯ ಬಹಿರಂಗವಾಗಬೇಕು. ಸತ್ಯ ಬಹಿರಂಗವಾಗಬೇಕಾದರೆ ವೈಜ್ಞಾನಿಕ ತನಿಖೆ ಮುಖ್ಯ ಆಗಿರುತ್ತದೆ.