ಕುಂದಾಪುರ, ಜ. 11 (DaijiworldNews/AA): ಕಳೆದ ಒಂದು ತಿಂಗಳಿನಿಂದ ಕುಂದಾಪುರ ತಾಲೂಕಿನಾದ್ಯಂತ ಸಂಭವಿಸಿದ ಮಂಗಗಳ ನಿಗೂಢ ಸಾವಿಗೆ ಮಂಗನಕಾಯಿಲೆ (ಕೆಎಫ್ಡಿ- ಕ್ಯಾಸನೂರು ಫಾರೆಸ್ಟ್ ಡಿಸೀಸ್) ಕಾರಣವಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಈ ವರದಿಯ ಬೆನ್ನಲ್ಲೇ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.

ಡಿಸೆಂಬರ್ 14 ರಂದು ಹೊಸಂಗಡಿಯಲ್ಲಿ ನಾಲ್ಕೈದು ಮಂಗಗಳು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಾಗ ಈ ಭೀತಿ ಆರಂಭವಾಗಿತ್ತು. ಅದೇ ಸಮಯದಲ್ಲಿ ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್ಡಿ ಪ್ರಕರಣಗಳು ವರದಿಯಾಗಿದ್ದರಿಂದ ಉಡುಪಿ ಜಿಲ್ಲೆಯಲ್ಲೂ ಆತಂಕ ಮೂಡಿತ್ತು.
ಹೊಸಂಗಡಿಯ ಕಾರೂರು ಎಂಬಲ್ಲಿ ಐದು ಮಂಗಗಳು ಮೃತಪಟ್ಟಿದ್ದರೂ, ಉಳಿದವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಕೇವಲ ಒಂದು ಮಾದರಿಯನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿತ್ತು. ಈ ಮಾದರಿಗಳು ಮತ್ತು ಮಲದ ಸ್ಯಾಂಪಲ್ಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಡಾಮಕ್ಕಿಯ ಮಾರ್ಮಣ್ಣು ಎಂಬಲ್ಲಿ ಮೃತಪಟ್ಟಿದ್ದ ಮಂಗನ ಮಾದರಿಯನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲವೂ ನೆಗೆಟಿವ್ ಎಂದು ವರದಿಯಾಗಿದೆ.
ಮಂಕಿ ಫೀವರ್ ಅಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ, ಮಂಗಗಳ ಸಾವಿಗೆ ಬೇರೆ ಕಾರಣವೇನಿರಬಹುದು ಎಂಬ ಪ್ರಶ್ನೆ ಮೂಡಿದೆ. ತೆಂಗು, ತರಕಾರಿ ಮತ್ತು ಹಣ್ಣಿನ ಬೆಳೆಗಳ ಮೇಲೆ ದಾಳಿ ಮಾಡುವ ಮಂಗಗಳಿಗೆ ಯಾರಾದರೂ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ವಿಷವಿಟ್ಟಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
"ಲ್ಯಾಬ್ ವರದಿಯಲ್ಲಿ ಕೆಎಫ್ಡಿ ಇಲ್ಲ ಎಂಬುದು ದೃಢಪಟ್ಟಿದೆ. ಆದರೂ ಈಗ ಮಂಕಿ ಫೀವರ್ ಸೀಸನ್ ಆರಂಭವಾಗಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಬೇಕು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬಾಧಿತ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗಳಿಗೆ ಡಿಎಂಪಿ ಎಣ್ಣೆಯನ್ನು ಪೂರೈಸಲಾಗಿದೆ.
ಮಂಗಗಳು ಮೃತಪಟ್ಟಿರುವುದು ಕಂಡುಬಂದಲ್ಲಿ ಗಾಬರಿಯಾಗದೆ ಅರಣ್ಯ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.