ಉಡುಪಿ, ಜ. 11 (DaijiworldNews/AA): "ಅನಾಥ ಮಕ್ಕಳನ್ನು ಮೀಸಲಾತಿಯ ವ್ಯಾಪ್ತಿಗೆ ತಂದಿರುವುದು ನನ್ನ ಸಾರ್ವಜನಿಕ ಜೀವನದ ಅತ್ಯಂತ ತೃಪ್ತಿಕರ ಕ್ಷಣಗಳಲ್ಲಿ ಒಂದಾಗಿದೆ" ಎಂದು ಹಿರಿಯ ರಾಜಕಾರಣಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.































ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಬೆಂಗಳೂರು, ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ.(ಎಂಎಂಎನ್ಎಲ್) ಹಾಗೂ ಡಾ. ಟಿ.ಎಂ.ಎ. ಪೈ ಫೌಂಡೇಶನ್ಗಳ ಸಹಯೋಗದೊಂದಿಗೆ ಜನವರಿ 10 ರಂದು ಆಯೋಜಿಸಿದ್ದ 'ಹೊಸ ವರ್ಷದ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಐವರು ಸಾಧಕರಲ್ಲಿ ಒಬ್ಬರಾಗಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಈ ಸಮಾರಂಭದಲ್ಲಿ ಸಾಮಾಜಿಕ, ಕಲೆ, ಸಂಸ್ಕೃತಿ ಹಾಗೂ ಇತರ ಕ್ಷೇತ್ರಗಳಿಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಐವರು ಗಣ್ಯ ಸಾಧಕ ವ್ಯಕ್ತಿಗಳನ್ನು 'ಹೊಸವರ್ಷದ ಪ್ರಶಸ್ತಿ-೨೦೨೬' ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ, ಕೆನರಾ ಬ್ಯಾಂಕ್ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ, ಕೆ. ಲಕ್ಷ್ಮೀನಾರಾಯಣನ್, ಯುಎಇಯ ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್, ಖ್ಯಾತ ಬಹುಭಾಷಾ ಚಲನಚಿತ್ರ ಹಾಗೂ ರಂಗಭೂಮಿ ನಟಿ ವಿನಯಾ ಪ್ರಸಾದ್, ಹಾಗೂ ಮಾಹೆ ವಿಶ್ವವಿದ್ಯಾಲಯದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ. ಜಯಪ್ರಕಾಶ್ ಹೆಗ್ಡೆ ಅವರು, "ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿರುವಾಗ ರಾಜ್ಯ ಸರ್ಕಾರವು ನನಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ನೀಡುವ ಜವಾಬ್ದಾರಿಯನ್ನು ನೀಡಿತ್ತು. ಅನಾಥ ಮಕ್ಕಳನ್ನೂ ಮೀಸಲಾತಿ ವ್ಯಾಪ್ತಿಗೆ ತರುವ ಮೂಲಕ ಕುಟುಂಬವಿಲ್ಲದ ಮಕ್ಕಳೂ ಸಮಾನ ಅವಕಾಶ ಪಡೆಯಲು ಸಾಧ್ಯವಾಗಿದೆ. ಪ್ರಾಯಶಃ ಇಂಥ ಸಮಾಜಪರ ಕೆಲಸಗಳಿಂದಾಗಿಯೇ ನಾನು ಈ ಪ್ರಶಸ್ತಿ ಸ್ವೀಕರಿಸಲು ಅರ್ಹನಿರುವುದಾಗಿ ಭಾವಿಸಿದ್ದೇನೆ" ಎಂದು ನುಡಿದರು.
ಡಾ. ಎಚ್.ಎಸ್. ಬಲ್ಲಾಳ್ (ಮಾಹೆ ಪ್ರೊ ಚಾನ್ಸಲರ್) ಮಾತನಾಡಿ, "ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಿದವರನ್ನು ಗುರುತಿಸುವುದು ನಮ್ಮ ಸಂಸ್ಕೃತಿಯನ್ನು ಬಲಪಡಿಸುತ್ತದೆ. ಈ ಸಾಧಕರ ಪಯಣ ನಮಗೆಲ್ಲರಿಗೂ ಸ್ಫೂರ್ತಿ" ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಸ್ವೀಕರಿಸಿದ ನಟಿ ವಿನಯಾ ಪ್ರಸಾದ್ ಅವರು ಮಾತನಾಡಿ, "ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದ ನನ್ನ ಪಯಣ ಶಿಸ್ತು ಮತ್ತು ಸಮರ್ಪಣಾ ಮನೋಭಾವವನ್ನು ಕಲಿಸಿದೆ. ಕಲೆ ಮತ್ತು ಕಲಿಕೆಗೆ ಹೆಸರಾದ ಉಡುಪಿಯಲ್ಲಿ ಈ ಗೌರವ ಸಿಕ್ಕಿರುವುದು ಸಂತಸ ತಂದಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಡಾ. ಎಂ.ಡಿ. ವೆಂಕಟೇಶ್ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, "ಶಿಕ್ಷಣ ಎಂಬುದು ಸಾಮೂಹಿಕ ಪ್ರಯತ್ನ. ಈ ಪ್ರಶಸ್ತಿಯನ್ನು ನಾನು ಮಾಹೆಯ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪರವಾಗಿ ಸ್ವೀಕರಿಸುತ್ತಿದ್ದೇನೆ" ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ. ಲಕ್ಷ್ಮೀನಾರಾಯಣನ್ ಅವರು, ತಮ್ಮ ಬ್ಯಾಂಕಿಂಗ್ ಜೀವನದ ಹಳೆಯ ನೆನಪುಗಳನ್ನು ಹಂಚಿಕೊಂಡರು. ಹಾಗೂ ಟಿ.ಎ. ಪೈ ಅವರ ಮಾರ್ಗದರ್ಶನ ಮತ್ತು ಜರ್ಮನಿ ಹಾಗೂ ಲಂಡನ್ನಲ್ಲಿ ಬ್ಯಾಂಕಿಂಗ್ ಅನುಭವ ಪಡೆದ ಬಗ್ಗೆ ವಿವರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ತುಂಬೆ ಮೊಯಿದ್ದೀನ್ ಅವರು ಮಾತನಾಡಿ, "ಈ ಪ್ರಶಸ್ತಿಯು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ತಂಡದ ಅವಿರತ ಶ್ರಮಕ್ಕೆ ಸಿಕ್ಕ ಮನ್ನಣೆಯಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ಮಾಹೆ ಟ್ರಸ್ಟ್ನ ಅಧ್ಯಕ್ಷ, ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಎಂಇಎAಜಿ ಅಧ್ಯಕ್ಷರಾದ ಡಾ.ರಂಜನ್ ಆರ್. ಪೈ, ಮಾಹೆ ಟ್ರಸ್ಟಿನ ಟ್ರಸ್ಟಿ ವಸಂತಿ ಆರ್. ಪೈ, ಮಣಿಪಾಲ ಮೀಡಿಯಾ ನೆಟ್ವರ್ಕ್ನ ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗೂ ಎಜಿಇ ಉಪಾಧ್ಯಕ್ಷರಾದ ಟಿ.ಸತೀಶ್ ಯು. ಪೈ ಮತ್ತು ಮಣಿಪಾಲದ ಡಾ.ಟಿ.ಎಂ.ಎ ಪೈ ಫೌಂಡೇಶನ್ನ ಟ್ರಸ್ಟಿ ಟಿ. ಸಚಿನ್ ಪೈ ಉಪಸ್ಥಿತರಿದ್ದರು. ಮಣಿಪಾಲ ಎಂಐಟಿ ನಿರ್ದೇಶಕ ಡಾ. ಅನಿಲ್ ರಾಣಾ ವಂದಿಸಿದರು.