ಸುಳ್ಯ, ಜ. 10 (DaijiworldNews/TA): ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ನಡೆಯುತ್ತಿದ್ದು, ಶುಕ್ರವಾರ ರಾತ್ರಿ ಶ್ರೀ ಚೆನ್ನಕೇಶವ ದೇವರಿಗೆ ಪ್ರಥಮವಾಗಿ ಪುಷ್ಪರಥೋತ್ಸವ ನಡೆಯಿತು.

ಇತ್ತೀಚೆಗೆ ದೇವಸ್ಥಾನದ ಹಳೆ ರಥವು ಪುಷ್ಪರಥವಾಗಿ ರೂಪುಗೊಂಡು ಕೋಟೇಶ್ವರದಿಂದ ಚೆನ್ನಕೇಶವ ದೇವಸ್ಥಾನಕ್ಕೆ ಬಂದಿತ್ತು. ಜಾತ್ರೋತ್ಸವದ ಸಂದರ್ಭದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಶ್ರೀ ಚೆನ್ನಕೇಶವ ದೇವರನ್ನು ಪುಷ್ಪರಥದಲ್ಲಿ ಕುಳ್ಳಿರಿಸಿ ದೇವಸ್ಥಾನದ ತಂತ್ರಿಗಳಿಂದ ಪೂಜೆ ನೆಡದ ಬಳಿಕ ರಥ ಎಳೆಯಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಡಾ.ಹರಪ್ರಸಾದ್ ತುದಿಯಡ್ಕ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಮಿತಿ ಸದಸ್ಯರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದು ರಥೋತ್ಸವವನ್ನು ಕಣ್ಣುಂಬಿಕೊಂಡರು. ರಾತ್ರಿ ಮಿತ್ತೂರು ದೈವಗಳ ಭಂಡಾರ ಮತ್ತು ಕಾನತ್ತಿಲ ದೈವಗಳ ಭಂಡಾರ ಬಂದ ಬಳಿಕ ರಥೋತ್ಸವ ನಡೆಯಿತು. ನಂತರ ವಾಲಸಿರಿ ಉತ್ಸವ ನಡೆಯಿತು.