ಮಂಗಳೂರು, ಜ. 10 (DaijiworldNews/TA): ಕರಾವಳಿ ಭಾಗವನ್ನು ಕೇರಳ ಮತ್ತು ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಹಬ್ ಆಗಿ ಪರಿವರ್ತಿಸಲು ರಾಜ್ಯ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಅವರು ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದರು. "ಈ ಭಾಗದ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಹೊಸ ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದೇವೆ. ರಾಜ್ಯದ ಕರಾವಳಿ ಭಾಗವನ್ನು ಹತ್ತಿರದ ಕೇರಳ ಮತ್ತು ಗೋವಾ ರಾಜ್ಯಗಳ ಮಾದರಿಯಲ್ಲಿ ಮುನ್ನಡೆಯಿಸಲು ಸರ್ಕಾರ ಕೆಲಸಮಾಡುತ್ತಿದೆ," ಎಂದರು.
ಅವರು ಸ್ಥಳೀಯ ಉದ್ಯೋಗ ಸೃಷ್ಟಿ ಕುರಿತಂತೆ ಮಾತನಾಡುತ್ತಾ, "ಮಂಗಳೂರಿನಲ್ಲಿ ಯುವಜನತೆ ಅತ್ಯಂತ ಪ್ರತಿಭಾಶಾಲಿಗಳು ಮತ್ತು ಬುದ್ಧಿವಂತರು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅವರು ಉದ್ಯೋಗಕ್ಕಾಗಿ ವಿವಿಧ ನಗರಗಳಿಗೆ ತೆರಳುತ್ತಿದ್ದಾರೆ. ಈ ವಲಸೆ ತಪ್ಪಿಸಲು, ನಾವು ಇಲ್ಲಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ಇಲ್ಲಿನ ಉದ್ಯಮಿಗಳು ತಮ್ಮ ಹೂಡಿಕೆಗೆ ಉತ್ಸುಕರಾಗಿದ್ದಾರೆ, ಅವರಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು," ಎಂದು ಹೇಳಿದರು.