ಉಡುಪಿ, ಜ. 09 (DaijiworldNews/TA): ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯಯದ ಬಹುವಿಧ ಕಾರ್ಯಕ್ರಮಗಳಿಗೆ ಶಿಖರಪ್ರಾಯವಾಗಿ ದಿಲ್ಲಿಯ ಶ್ರೀಕೃಷ್ಣ ಭಕ್ತರಾದ ಎಸ್. ಲಕ್ಷ್ಮೀನಾರಾಯಣನ್ ಅವರು ಸುಮಾರು 2 ಕೋ.ರೂ. ವೆಚ್ಚದಲ್ಲಿ ಸಿದ್ದಪಡಿಸಿರುವ 'ಹೊನ್ನಿನ ಭಗವದ್ಗೀತಾ ಹೊತ್ತಗೆ’ ಲೋಕಾರ್ಪಣೆಗೊಂಡಿದೆ.

5ತಿಂಗಳಿನಿಂದ ಸುವರ್ಣಮಯ ಭಗದ್ಗೀತೆ ಸಿದ್ದಪಡಿಸುವ ಕಾರ್ಯ ನಡೆದಿತ್ತು. ತಾಮ್ರದ ಹಾಳೆಯನ್ನು ಬಳಸಿ ಚಿನ್ನದ ಪೂರ್ಣ ಕೋಟಿಂಗ್ ನೀಡಿ ಇದನ್ನು ರೂಪಿಸಲಾಗಿದೆ. ಸುದೀರ್ಘ ವರ್ಷಗಳ ಕಾಲ ಸಂರಕ್ಷಿಸಿಡುವ ತಂತ್ರಜ್ಞಾನ ಬಳಸಲಾಗಿದೆ. ನೀರು ತಾಗಿದರೂ ಏನೂ ಆಗದು. ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು 122 ಚಿನ್ನದ ಹಾಳೆ (ತಗಡು)ಯ ಪುಟಗಳಲ್ಲಿ ಅಂದವಾಗಿ ಮುದ್ರಿಸಲಾಗಿದೆ.
ಹೊನ್ನಿನ ಭಗವದ್ಗೀತಾ ಹೊತ್ತಗೆಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಮರವ ಣಿಗೆ ಮೂಲಕ ಕೃಷ್ಣ ಸಾನ್ನಿಧ್ಯಕ್ಕೆ ತಂದು, ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.