ಕುಂದಾಪುರ, ಜ. 08 (DaijiworldNews/AA): ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಎಂಬಲ್ಲಿ ನಾಪತ್ತೆಯಾಗಿದ್ದ 10 ವರ್ಷದ ಬಾಲಕನನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜ್ಜಾಡಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ಜನವರಿ 7ರ ಸಂಜೆ ಬೆಣ್ಗೆರೆ ನಾಗಬನ ಸಮೀಪ ಆಟವಾಡಲು ಹೋದವನು ಮನೆಗೆ ಮರಳಿರಲಿಲ್ಲ. ಬಾಲಕನು ತನ್ನ ಸೋದರಮಾವ ವಸಂತ ಪೂಜಾರಿ ಎಂಬುವವರ ಮನೆಯಲ್ಲಿ ನೆಲೆಸಿದ್ದನು. ರಾತ್ರಿಯಾದರೂ ಮಗು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಠಾಣಾ ನಿರೀಕ್ಷಕ ಪವನ್ ನಾಯಕ್ ಅವರು ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಅವರ ಮಾರ್ಗದರ್ಶನದಲ್ಲಿ ಹುಡುಕಾಟ ಆರಂಭಿಸಿದರು. ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ತೀವ್ರ ಶೋಧ ನಡೆಸಲಾಯಿತು.
ತಡರಾತ್ರಿ ಶೋಧ ಮುಂದುವರಿಸಿದ ತಂಡಕ್ಕೆ, ಮನೆಯಿಂದ ಸುಮಾರು 250 ಮೀಟರ್ ದೂರದಲ್ಲಿರುವ ಬಂಡೆಯೊಂದರ ಕೆಳಗಿನ ಸಂದಿಯಲ್ಲಿ ಬಾಲಕ ಮಲಗಿರುವುದು ಕಂಡುಬಂದಿದೆ. ಸುರಕ್ಷಿತವಾಗಿದ್ದ ಬಾಲಕನನ್ನು ರಕ್ಷಿಸಿ, ಮನೆಯವರಿಗೆ ಹಸ್ತಾಂತರಿಸಲಾಯಿತು.