ಉಡುಪಿ, ಜ. 07 (DaijiworldNews/AA): ಶೀರೂರು ಪರ್ಯಾಯ-2026ರ ಸಂಭ್ರಮಾಚರಣೆಯ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಮಾಧ್ಯಮ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಜನವರಿ 7ರಂದು ಶೀರೂರು ಮಠದ ಸಭಾಂಗಣದಲ್ಲಿ ನಡೆಯಿತು.


















ಮಾಧ್ಯಮ ಕೇಂದ್ರವನ್ನು ಉಡುಪಿ ಶಾಸಕ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಆನೆಗುಡ್ಡೆ ಕ್ಷೇತ್ರದ ಮೊಕ್ತೇಸರರಾದ ರಮಣ ಉಪಾಧ್ಯಾಯ ಅವರು ವಿಶೇಷ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ, ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಅನುಗ್ರಹದಿಂದ ಪರ್ಯಾಯ ಮಹೋತ್ಸವವು ಸುಗಮವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಅವರು ಪರ್ಯಾಯ ಕಾರ್ಯಕ್ರಮಗಳು ಮತ್ತು ಪುರಪ್ರವೇಶದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ಪುರಪ್ರವೇಶ ಮೆರವಣಿಗೆಯ ಸಂಯೋಜಕ ಗಣೇಶ್ ರಾವ್ ಮಾತನಾಡಿ, "ಮೆರವಣಿಗೆಯು ಕಡಿಯಾಳಿಯಿಂದ ಪ್ರಾರಂಭವಾಗಿ ನಗರ ಬಸ್ ನಿಲ್ದಾಣದ ಮೂಲಕ ಶ್ರೀಕೃಷ್ಣ ಮಠವನ್ನು ತಲುಪಲಿದೆ. ಈ ಮೆರವಣಿಗೆಯಲ್ಲಿ 1,000ಕ್ಕೂ ಹೆಚ್ಚು ಭಜನಾ ತಂಡಗಳು, ಸ್ಥಳೀಯ ಜಾನಪದ ಕಲಾ ತಂಡಗಳು ಹಾಗೂ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.
ಹೊರೆಕಾಣಿಕೆ ಸಂಯೋಜಕ ಸುಪ್ರಸಾದ್ ಶೆಟ್ಟಿ ಮಾತನಾಡಿ, "ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರ ಆಶಯದಂತೆ ಉಡುಪಿ ಜಿಲ್ಲೆಯ ಪ್ರತಿ ಮನೆಯಿಂದಲೂ ಕಾಣಿಕೆ ಅರ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಜಿಲ್ಲೆಯನ್ನು ಎಂಟು ವಲಯಗಳಾಗಿ ವಿಂಗಡಿಸಲಾಗಿದ್ದು, ಒಟ್ಟು 54 ಹೊರೆಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೀನುಗಾರರ ಸಂಘಗಳು, ಸಹಕಾರಿ ಒಕ್ಕೂಟಗಳು, ಬೆಳ್ತಂಗಡಿಯ ಭಕ್ತವೃಂದ, ಕನ್ನರ್ಪಾಡಿ ಭಕ್ತ ಬಳಗ, ಮಟ್ಟುಗುಳ್ಳ ಸಮರ್ಪಣಾ ತಂಡಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಕಾಣಿಕೆ ಸಮರ್ಪಣೆಯಾಗಲಿದೆ" ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪರ್ಯಾಯಕ್ಕೆ ಇನ್ನು ಹತ್ತು ದಿನಗಳು ಮಾತ್ರ ಬಾಕಿ ಇವೆ. ನಗರಸಭೆ ವತಿಯಿಂದ ರಸ್ತೆ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಬಾಲಾಜಿ ಯೋಗೀಶ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಇಂದ್ರಾಳಿ ಜಯಕರ್ ಶೆಟ್ಟಿ, ಸಗ್ರಿ ಗೋಪಾಲಕೃಷ್ಣ ಸಾಮಗ, ಗಣೇಶ್ ರಾವ್, ರಮೇಶ್ ಕಾಂಚನ್, ದಿನಕರ್ ಹೇರೂರು, ರಮೇಶ್ ಬಂಗೇರ, ಪ್ರಚಾರ ಸಮಿತಿ ಸಂಯೋಜಕ ನಂದನ್ ಜೈನ್, ಮಧುಕರ್ ಮುದ್ರಾಡಿ ಮತ್ತಿತರರು ಉಪಸ್ಥಿತರಿದ್ದರು. ಅಶ್ವತ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ, ಕಾಪು ಶಾಸಕ ಹಾಗೂ ಶೀರೂರು ಪರ್ಯಾಯದ ಗೌರವ ಸಲಹೆಗಾರರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಶೀರೂರು ಮಠದ ಪರವಾಗಿ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಅವರು ಅಧಿಕೃತವಾಗಿ ಆಮಂತ್ರಣ ಪತ್ರಿಕೆಯನ್ನು ನೀಡಿದರು.