ಉಡುಪಿ, ಜ. 06 (DaijiworldNews/AK): ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಉಡುಪಿ ನಗರ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆ ಮಸೀದಿ ಬಳಿ ನಿವಾಸಿ ಅಬ್ದುಲ್ ರೌಫ್ (26) ಎಂದು ಗುರುತಿಸಲಾಗಿದೆ.
ಉಡುಪಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರಭು ಡಿಟಿ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡವು ಉಡುಪಿಯ ಶಿವಳ್ಳಿ ಗ್ರಾಮದ ಸಾರ್ವಜನಿಕ ಪ್ರದೇಶವಾದ ಕರಂಬಳ್ಳಿ ರಾಮಬೆಟ್ಟು ಬಳಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಆಟೋವೊಂದನ್ನು ತಡೆದು ಪರಿಶೀಲಿಸಿದಾಗ ಮಾದಕವಸ್ತು ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಮಾರಾಟಕ್ಕೆ ಉದ್ದೇಶಿಸಲಾಗಿದ್ದ 7.59 ಗ್ರಾಂ ಎಂಡಿಎಂಎ ಪುಡಿಯನ್ನು ಹೊಂದಿದ್ದ ಎನ್ನಲಾಗಿದೆ. ಇದರ ಬೆಲೆ ಸುಮಾರು 15,000 ರೂ. ಎಂದು ಅಂದಾಜಿಸಲಾಗಿದೆ.
ಎಂಡಿಎಂಎ ಮಾರಾಟದಿಂದ ಬಂದ 3,100 ರೂ. ನಗದು ಮತ್ತು ಕಳ್ಳಸಾಗಣೆ ಮಾಡಲು ಬಳಸಲಾದ ಕಪ್ಪು-ಹಳದಿ ಬಣ್ಣದ ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ದ್ರವ್ಯಗಳು ಮತ್ತು ಆಸ್ತಿಯ ಒಟ್ಟು ಮೌಲ್ಯ 3.23 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಪಿಎಸ್ಐಗಳಾದ ಭರತೇಶ್ ಕಂಕಣವಾಡಿ, ಗೋಪಾಲ ಕೃಷ್ಣ ಜೋಗಿ, ಸಿಬ್ಬಂದಿಗಳಾದ ಹರೀಶ್ ನಾಯ್ಕ್, ಪ್ರಸನ್ನ ಸಿ, ನೇತ್ರಾವತಿ, ಸತೀಶ್ ಪಲ್ಲಿ, ಹೇಮಂತ್ ಕುಮಾರ್, ಸಂತೋಷ್ ರಾಥೋಡ್, ಆನಂದ್ ಕಾರ್ಯಾಚರಣೆ ನಡೆಸಿದರು.