ಉಡುಪಿ, ಜ. 06 (DaijiworldNews/TA): ಹಿರಿಯಡ್ಕದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಜನವರಿ 2ರಂದು ಮಧ್ಯಾಹ್ನ 12:30ರ ಸುಮಾರಿಗೆ ಅಂಜಾರು ರಿಂಗ್ ರೋಡ್ ಬಳಿ ಹಿರಿಯಡ್ಕ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದರು.

ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸುಮಾರು ಮೂರು ಯುನಿಟ್ ಮರಳು ಸಾಗಾಟ ಮಾಡಲಾಗುತ್ತಿದ್ದು, ಅದರ ಮೌಲ್ಯ ಸುಮಾರು 13000 ರೂಪಾಯಿ ಎಂದು ಅಂದಾಜಿಸಲಾಗಿದೆ. ಚೇರ್ಕಾಡಿ ಕನ್ನಾರು ಪೆಟ್ರೋಲ್ ಬಂಕ್ ಸಮೀಪದಿಂದ ಮರಳು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಚಾಲಕ ಶೇಖ್ ಮಹಮ್ಮದ್ ನದೀಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.