ಮಂಗಳೂರು, ಜ. 06 (DaijiworldNews/TA): ತುಳು ನಾಡು ಎಂದರೆ ದೈವ-ದೇವರ ನಾಡು, ಧರ್ಮ-ಸಂಸ್ಕೃತಿಯ ಬೀಡು. ಇಂತಹ ಪವಿತ್ರ ನಾಡಿನ ಅತ್ಯಂತ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಸತ್ಯ, ಧರ್ಮ ಮತ್ತು ನ್ಯಾಯಕ್ಕೆ ಹೆಸರಾದ ಕೋಟಿ-ಚೆನ್ನಯ್ಯರು ನೆಲೆನಿಂತ ಈ ಪವಿತ್ರ ಗರಡಿ ಕ್ಷೇತ್ರದಲ್ಲಿ ನಡೆಯುವ ಗರೋಡಿ ಜಾತ್ರೆ ಮಂಗಳೂರು ನಗರಕ್ಕೆ ಮಾತ್ರವಲ್ಲ, ಇಡೀ ಜಿಲ್ಲೆಗೂ ಸಂಭ್ರಮ ತರುವ ಮಹಾ ಉತ್ಸವವಾಗಿದೆ.

ಸುಮಾರು ಐದು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಮಡಿಕೇರಿ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಶ್ರೀ ಬ್ರಹ್ಮ ಬೈದರ್ಕಳ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಭಕ್ತಿಭಾವದಿಂದ ಕೃತಾರ್ಥರಾಗುತ್ತಿದ್ದಾರೆ.
ಜನವರಿ 2ರಂದು ಗರೋಡಿ ಜಾತ್ರೆಗೆ ಅಧಿಕೃತ ಚಾಲನೆ ದೊರೆತಿದ್ದು, ವಿವಿಧ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಉತ್ಸವ ಸಾಗುತ್ತಿದೆ. ನಿನ್ನೆ ಬೈದರ್ಕಳರು ಒಲಿಮರೆಯಿಂದ ಹೊರಡೋದು, ರಾತ್ರಿ ದೇಯಿ–ಬೈದೆತಿ ಭೇಟಿ ಸೇರಿದಂತೆ ವೈಭವೋಪೇತ ಆಚರಣೆಗಳು ನಡೆದವು. ಮಧ್ಯರಾತ್ರಿ ಶ್ರೀ ಬ್ರಹ್ಮರಿಗೆ ಚಂದ್ರಮಂಡಲ ರಥೋತ್ಸವ ಸೇವೆ ನೆರವೇರಿದ್ದು, ಭಕ್ತರಲ್ಲಿ ಅಪಾರ ಉತ್ಸಾಹ ಮತ್ತು ಭಕ್ತಿ ಮೂಡಿಸಿದೆ. ಇಂದು ರಾತ್ರಿ ವಿವಿಧ ಉತ್ಸವಗಳ ನಂತರ ಬೈದರ್ಕಳ ದರ್ಶನ ನಡೆಯಲಿದ್ದು, ಬಳಿಕ ಧ್ವಜ ಅವರೋಹಣದೊಂದಿಗೆ ಜಾತ್ರೆಗೆ ಮಂಗಳಾರತಿ ನೆರವೇರಲಿದೆ.
ಈ ಗರಡಿಯ ಹಿನ್ನಲೆ ಕೂಡ ಅತ್ಯಂತ ಪೌರಾಣಿಕ ಮತ್ತು ನಂಬಿಕೆಯಿಂದ ಕೂಡಿದೆ. 1872ರಲ್ಲಿ ಕಂಕನಾಡಿ, ಮರೋಳಿ, ಬಜಾಲು, ಅಳಪೆ ಮತ್ತು ಜಪ್ಪು ಎಂಬ ಐದು ಗ್ರಾಮದ ಹಿರಿಯರು ಮಿಜಾರು ಗರಡಿಯಲ್ಲಿ ನಡೆದ ಬೈದರ್ಕಳ ನೇಮೋತ್ಸವವನ್ನು ವೀಕ್ಷಿಸಿ, ತಮ್ಮ ಊರಲ್ಲೂ ಇಂತಹ ಗರಡಿ ಸ್ಥಾಪಿಸಬೇಕೆಂದು ಸಂಕಲ್ಪ ಮಾಡಿಕೊಂಡಿದ್ದರು. ಅಲ್ಲಿ ಬೈದರ್ಕಳ ಅಭಯ ಪ್ರಸಾದ ಸ್ವೀಕರಿಸಿ ಗಂಧ ಪ್ರಸಾದದೊಂದಿಗೆ ಅವರು ಹಿಂದಿರುಗಿದರು.
ಮರುಪಯಣದಲ್ಲಿ ಇಬ್ಬರು ಯುವಕರು ತಮ್ಮನ್ನು ಹಿಂಬಾಲಿಸುತ್ತಿರುವಂತೆ ಕಾಣಿಸಿಕೊಂಡಿದ್ದು, ಬಿಕರ್ನಕಟ್ಟೆ ಬಳಿ ಬಂದಾಗ ಆ ಯುವಕರು ಅಚಾನಕ್ ಕಣ್ಮರೆಯಾಗಿದ್ದರು. ನಂತರ ಕುಕ್ಕಿಕಟ್ಟೆ ಬಳಿ ವಿಶ್ರಾಂತಿ ಪಡೆದ ಐವರು ಹಿರಿಯರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಆದರೆ ಬೆಳಗ್ಗೆ ಎದ್ದು ನೋಡಿದಾಗ, ಅವರ ಮನೆಂಗಳಗಳಲ್ಲಿ ಒಣಗಲು ಹಾಕಿದ್ದ ಭತ್ತದ ಕಾಳುಗಳು ಮೊಳಕೆ ಒಡೆದಿರುವುದು ಕಂಡುಬಂದಿತು. ಇದನ್ನು ಶುಭ ಸೂಚನೆ ಎಂದು ಭಾವಿಸಿದ ಹಿರಿಯರಿಗೆ ದೇವಿ ದರ್ಶನದಲ್ಲಿ, ತಮ್ಮನ್ನು ಹಿಂಬಾಲಿಸಿದವರು ಬೈದರ್ಕಳರೇ ಎಂಬ ದೈವೀ ಸಂದೇಶ ದೊರಕಿತು. ಅದಾದ ಬಳಿಕ ಇಲ್ಲಿ ಗರಡಿ ಸ್ಥಾಪನೆಯಾಯಿತು.
ಅಂದಿನಿಂದ ಇಂದಿನವರೆಗೆ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಪವಿತ್ರ ಕ್ಷೇತ್ರವಾಗಿ, ಜನರ ಅಪಾರ ನಂಬಿಕೆ ಮತ್ತು ಭಕ್ತಿಗೆ ಪಾತ್ರವಾಗಿರುವ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಇದೀಗ ನಡೆಯುತ್ತಿರುವ ಜಾತ್ರಾ ಮಹೋತ್ಸವವೂ ತುಳು ನಾಡಿನ ಸಂಸ್ಕೃತಿ, ಪರಂಪರೆ ಮತ್ತು ದೈವ ನಂಬಿಕೆಯನ್ನು ಮತ್ತೊಮ್ಮೆ ಸ್ಮರಿಸುವ ಭಕ್ತಿಪೂರ್ಣ ಸಂಭ್ರಮವಾಗಿ ಮೂಡಿಬಂದಿದೆ.