ಮಂಗಳೂರು, ಜ. 05 (DaijiworldNews/AK):ಕಳೆದ ಆರು ತಿಂಗಳಿನಿಂದ ಶಾಂತಿಯುತ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದ್ದರೂ, ಬೆಟ್ಟಿಂಗ್ ಸಿಂಡಿಕೇಟ್ಗಳು, ಮಾಫಿಯಾ ಜಾಲಗಳು ಮತ್ತು ರಾಜಕೀಯ ನಾಯಕರ ಒಂದು ಭಾಗದ ಒತ್ತಡದಿಂದಾಗಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ (ಡಿಕೆ) ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಅರುಣ್ ಅವರನ್ನು ವರ್ಗಾವಣೆ ಮಾಡಲು ಹುನ್ನಾರ ನಡೆಯುತ್ತಿವೆ ಎಂದು ವರದಿಯಾಗಿದೆ.

ಕಳೆದ ಆರು ತಿಂಗಳಿನಿಂದ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಗಲಭೆ ಅಥವಾ ಕೋಮು ಗಲಭೆಗಳು ನಡೆದಿಲ್ಲ. ಮರಳು ಗಣಿಗಾರಿಕೆ, ಕೆಂಪು ಕಲ್ಲು ಸಾಗಣೆ, ಮಟ್ಕಾ ಮತ್ತು ಜೂಜಾಟದ ಅಡ್ಡೆಗಳಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲಾಗಿದೆ..
ಕೋಮು ಹಣೆಪಟ್ಟಿ ಕಟ್ಟಿ ಒಂದಿಲ್ಲೊಂದು ಅಕ್ರಮದಲ್ಲೇ ಮಿಂದು ಹೋಗಿದ್ದ ಜಿಲ್ಲೆಯನ್ನು ಕೇವಲ 6 ತಿಂಗಳಲ್ಲಿ ಬಹುತೇಕ ಸ್ವಚ್ಛ ಮಾಡಿದವರು ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ.ಅರುಣ್. ಆದರೆ ಅಕ್ರಮವನ್ನೇ ಉಸಿರನ್ನಾಗಿಸಿದ ಮಾಫಿಯಾಗಳು, ಕೆಲವೊಂದು ಉದ್ಯಮಿಗಳು ಈಗ ಚಡಪಡಿಸುತ್ತಿದ್ದು ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ.
ಇದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಕೆಲವೊಂದು ನಾಯಕರೂ ಕೂಡ ಸಾಥ್ ನೀಡಿ ಹಿರಿಯ ನಾಯಕರ ಬೆನ್ನು ಬಿದ್ದಿರುವ ಅಂಶ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಕದಡಲು ಕಾರಣವೇ ಇಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ. ಗಣಿಗಾರಿಕೆ, ಸ್ಕಿಲ್ಗೇಮ್, ಇಸ್ಪೀಟ್ ಅಡ್ಡೆಗಳು. ಇದನ್ನು ಮನಗಂಡ ಪೊಲೀಸ್ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ಕಾರ್ಯಾಚರಣೆ ಆರಂಭಿಸಿ, ಆಕ್ರಮಗಳ ಎಡೆಮುರಿ ಕಟ್ಟಿದರು. ಇದರ ನೇರ ಹೊಡೆತ ಸ್ವತಃ ಸ್ಥಳೀಯ ಜನಪ್ರತಿನಿಧಿಗಳಿಗೂ ತಟ್ಟಿದ್ದು ವಿಚಲಿತರಾಗಿದ್ದಾರೆ.
ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ.ಅರುಣ್ ಜಿಲ್ಲೆಗೆ ಅಧಿಕಾರಿಗಳಾಗಿ ಬಂದ ಬಳಿಕ ಅಕ್ರಮ ದಂಧೆಕೋರರಿಗೆ ಉಸಿರಾಡಲು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆಗೆ ನಾನಾ ರೀತಿಯ ಕಸರತ್ತನ್ನು ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಕೃಷ್ಣಾಷ್ಟಮಿ, ಗಣೇಶೋತ್ಸವ ಸಂದರ್ಭ ಧ್ವನಿವರ್ಧಕ ವಿಚಾರದಲ್ಲಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆದರೆ, ಇದೀಗ ಧಾರ್ಮಿಕ ಭಾವನೆ, ಆಚರಣೆ, ಸಂಪ್ರದಾಯ ಹೆಸರಿನಲ್ಲೂ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಆಡಳಿತ ಪಕ್ಷದ ಕೆಲವೊಂದು ನಾಯಕರು ಅಧಿಕಾರಿಗಳ ವರ್ಗಾವಣೆಗೆ ಪ್ರಯತ್ನ
ಡಿಸೆಂಬರ್ ಪಟ್ಟಿಯಲ್ಲೂ ಹೆಸರಿಲ್ಲ .ಸಾಮಾನ್ಯವಾಗಿ ಐಪಿಎಸ್, ಐಎಎಸ್ ದರ್ಜೆ ಅಧಿ ಕಾರಿಗಳನ್ನು ಡಿಸೆಂಬರ್ ನಲ್ಲಿ ಸಾಮೂಹಿಕ ವರ್ಗಾವಣೆ ಮಾಡಲಾಗುತ್ತದೆ. ಹೀಗಿರುವಾಗ ದಕ್ಷಿಣ ಕನ್ನಡ ಎಸ್ಪಿ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಡಿಸೆಂಬರ್ ತಿಂಗಳಿನಲ್ಲಿ ಪ್ರಮೋಷನ್ ಅಥವಾ ವರ್ಗಾವಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಮಾಫಿಯಾ ಕುಳಗಳಿದ್ದರು.
ಆದರೆ ಡಿಸೆಂಬರ್ ಪಟ್ಟಿಯಲ್ಲೂ ಇವರ ಹೆಸರು ಇಲ್ಲದಿರುವುದು ಮಾಫಿಯಾಗಳಿಗೆ ನಿರಾಸೆ ಮೂಡಿಸಿದೆ. ಸುಧೀರ್ ಕುಮಾರ್ ರೆಡ್ಡಿ ಅವರಿಗೆ 2028ರ ಜನವರಿ ಪದೋನ್ನತಿ ವರ್ಷವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಕೆಪಿಸಿಸಿ ಹಿರಿಯ ಮುಖಂಡರು ಸೇರಿದಂತೆ ಬೆಂಗಳೂರಿನ ಹಿರಿಯ ನಾಯಕರು ಮಾತ್ರ ಈ ವರ್ಗಾವಣೆಗೆ ಸುತರಾಂ ಒಪ್ಪುತ್ತಿಲ್ಲ ಎಂಬುದು ತಿಳಿದು ಬಂದಿದೆ.
ರಾಜ್ಯ ಗೃಹ ಇಲಾಖೆಯಲ್ಲಿ ಪಶ್ಚಿಮ(ಮಂಗಳೂರು ಕಮಿಷನರೇಟ್ ಸೇರಿದಂತೆ) ಐಜಿಪಿ ವಲಯ ಸೂಕ್ಷ್ಮ ವಲಯವಾಗಿದ್ದು, ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಈ ಕಾರಣದಿಂದ ಯಾವುದೇ ಅಧಿಕಾರಿಗಳನ್ನು ಸದ್ಯದ ಮಟ್ಟಿಗೆ ವರ್ಗಾವಣೆ ಮಾಡದಿರಲು ಸಿಎಂ, ಡಿಜಿ ಸೇರಿದಂತೆ ಹಿರಿಯ ನಾಯಕರು, ಅಧಿಕಾರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.