ಮಂಗಳೂರು, ಜ. 04 (DaijiworldNews/TA): ನಗರದ ಲಾಡ್ಜ್ವೊಂದರಲ್ಲಿ ಸುಮಾರು 40–45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ದಾಖಲೆಗಳ ಪ್ರಕಾರ, ಮಣಿ ಎಂದು ಹೆಸರು ತಿಳಿಸಿದ ಅಪರಿಚಿತ ವ್ಯಕ್ತಿ ಡಿಸೆಂಬರ್ 26ರಂದು ಲಾಡ್ಜ್ನಲ್ಲಿ ಕೊಠಡಿ ಪಡೆದಿದ್ದನು. ಡಿಸೆಂಬರ್ 31ರ ಬೆಳಿಗ್ಗೆ ಲಾಡ್ಜ್ ಸಿಬ್ಬಂದಿ ಆತನೊಂದಿಗೆ ಮಾತನಾಡಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದನು. ತಕ್ಷಣವೇ ಸಿಬ್ಬಂದಿ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಸುಮಾರು 5.8 ಅಡಿ ಎತ್ತರ ಹೊಂದಿದ್ದು, ಕಪ್ಪು ಮೈಬಣ್ಣವಿದ್ದಾನೆ. ಎದೆಯ ಮೇಲೆ ಕಪ್ಪು ಗುರುತು ಕಂಡುಬಂದಿದ್ದು, ಬಲಗೈಗೆ ಕೆಂಪು ದಾರ ಕಟ್ಟಲಾಗಿತ್ತು. ಆತ ಕಂದು ಬಣ್ಣದ ಟಿ-ಶರ್ಟ್ ಹಾಗೂ ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಇರುವವರು ಬಂದರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.