ಮಂಗಳೂರು, ಜ. 04 (DaijiworldNews/TA): ಕಾನೂನು ಕಾರಣ ಮುಂದಿಟ್ಟು ಪ್ರಸಿದ್ಧ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ದೈವಸ್ಥಾನದ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವ ವಿಚಾರ ಇದೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದೆ. ಜೂಜು ಹಾಗೂ ಪ್ರಾಣಿ ಹಿಂಸೆ ಆರೋಪಗಳನ್ನು ಮುಂದಿಟ್ಟುಕೊಂಡು ಮಂಗಳೂರು ಪೊಲೀಸರು ಕೋಳಿ ಅಂಕಕ್ಕೆ ತಡೆ ನೀಡಿದ ಹಿನ್ನೆಲೆ, ಗರೋಡಿ ಆಡಳಿತ ಸಮಿತಿ ದೈವಗಳ ಮೊರೆ ಹೋಗಿದೆ.

ವಿಟ್ಲ ಕೇಪು ಉಳ್ಳಾಲ್ತಿ ಬಳಿಕ ಇದೀಗ ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಕಂಕನಾಡಿ ಗರೋಡಿ ಜಾತ್ರೆಯ ಸಾಂಪ್ರಾದಾಯಿಕ ಕೋಳಿ ಅಂಕಕ್ಕೂ ಅನುಮತಿ ನಿರಾಕರಿಸಲಾಗಿದೆ. ಹಲವು ಬಾರಿ ಮನವಿ ಹಾಗೂ ಮನವರಿಕೆ ಮಾಡಿದರೂ ಪೊಲೀಸರು ಒಪ್ಪದ ಕಾರಣ, ಗರೋಡಿ ಆಡಳಿತ ಸಮಿತಿ ದೈವವೇ ದಾರಿ ತೋರಿಸಿಕೊಡಲಿ ಎಂದು ಕೋಟಿ ಚೆನ್ನಯ್ಯರಿಗೆ ಪ್ರಾರ್ಥನೆ ಸಲ್ಲಿಸಿದೆ.
ದರ್ಶನದ ವೇಳೆ ದೈವಗಳು, “ಈ ಬಾರಿ ಯಾಕೆ ಕೋಳಿ ಅಂಕ ನಡೆಯಲಿಲ್ಲ?” ಎಂದು ಪ್ರಶ್ನಿಸಿದ್ದು, ಪೊಲೀಸರು ತಡೆ ನೀಡಿರುವ ವಿಚಾರವನ್ನು ಭಕ್ತರು ತಿಳಿಸಿದರು. ಇದಕ್ಕೆ ಪ್ರತಿಯಾಗಿ ದೈವಗಳಿಂದ, “ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ” ಎಂಬ ನುಡಿ ನೀಡಿದೆ ಎಂದು ಗರೋಡಿ ಮೂಲಗಳು ತಿಳಿಸಿವೆ.
ಈ ಕುರಿತು ಗರೋಡಿ ಕ್ಷೇತ್ರದ ಟ್ರಸ್ಟಿ ಚಂದ್ರನಾಥ್ ಅತ್ತಾವರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗೆ ಅನೇಕ ಕಾರ್ಣಿಕಗಳ ಇತಿಹಾಸವಿದೆ ಎಂದರು. 1997ರ ಆಯೋಧ್ಯೆ ರಾಮ ಮಂದಿರ ವಿವಾದದ ವೇಳೆ ಕರ್ಫ್ಯೂ ಇದ್ದರೂ ಇಲ್ಲಿ ಕೋಳಿ ಅಂಕ ನಡೆದಿತ್ತು. ಕೊರೊನಾ ಸಂಕಷ್ಟದ ಸಮಯದಲ್ಲೂ ದೈವಗಳ ಕೃಪೆಯಿಂದ ಈ ಪರಂಪರೆ ಮುಂದುವರಿದಿತ್ತು ಎಂದು ಹೇಳಿದರು.
“ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ. ಈ ಬಾರಿ ಕೂಡ ಕೋಳಿ ಅಂಕವನ್ನು ಸುಸೂತ್ರವಾಗಿ ನಡೆಸುವುದಾಗಿ ದೈವ ನುಡಿ ದೊರೆತಿದೆ. ಜೂಜು ನಡೆದರೆ ಪೊಲೀಸರು ಕ್ರಮ ಕೈಗೊಳ್ಳಲಿ. ಆದರೆ ಶತಮಾನಗಳ ಧಾರ್ಮಿಕ ನಂಬಿಕೆ ಮತ್ತು ಪರಂಪರೆಗೆ ಅಡ್ಡಿಪಡಿಸಬಾರದು” ಎಂದು ಚಂದ್ರನಾಥ್ ಅತ್ತಾವರ ಮನವಿ ಮಾಡಿದ್ದಾರೆ.