ಉಡುಪಿ, ಜ. 03 (DaijiworldNews/AA): ಪುರಾತನ ಕಾಲದಿಂದಲೂ ಶ್ರೀ ಕೃಷ್ಣ ಮಠದಲ್ಲಿ ನಡೆದು ಬರುತ್ತಿರುವ ಹಿಂದೂ-ಮುಸ್ಲಿಮರ ಸೌಹಾರ್ದತೆ ಹಾಗೂ ಐಕ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಮುಂಬರುವ ಶಿರೂರು ಮಠದ ಪರ್ಯಾಯೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.




ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹಾಜಿ ಕೆ. ಅಬೂಬಕ್ಕರ್ ಪರ್ಕಳ, "ಕೋಮು ಸೌಹಾರ್ದತೆಯನ್ನು ಬಲಪಡಿಸುವ ಮತ್ತು ಶ್ರೀಕೃಷ್ಣ ಮಠದಲ್ಲಿ ಅನಾದಿ ಕಾಲದಿಂದಲೂ ಇರುವ ಏಕತೆಯ ಪರಂಪರೆಯನ್ನು ಜೀವಂತವಾಗಿರಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಿತಿಯು ಕಳೆದ ಹಲವು ವರ್ಷಗಳಿಂದ ಪರ್ಯಾಯ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಇಂತಹ ಸೌಹಾರ್ದ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ" ಎಂದರು.
ಜನವರಿ 9ರಂದು ನಡೆಯಲಿರುವ ಶಿರೂರು ಶ್ರೀಗಳ 'ಪುರ ಪ್ರವೇಶ' ಸಮಾರಂಭದಲ್ಲಿ ಭಾಗವಹಿಸುವ ಸಾವಿರಾರು ಭಕ್ತಾದಿಗಳಿಗೆ ಸಮಿತಿಯ ವತಿಯಿಂದ ತಂಪು ಪಾನೀಯಗಳನ್ನು ವಿತರಿಸಲಾಗುವುದು. ಜನವರಿ 13ರಂದು ಮಧ್ಯಾಹ್ನ ಜೋಡುಕಟ್ಟೆಯಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಮುಸ್ಲಿಂ ಸಾಂಸ್ಕೃತಿಕ ಕಲಾ ಪ್ರಕಾರವಾದ 'ದಫ್' ಹೊಡೆಯುವ ಕಾರ್ಯಕ್ರಮ ನಡೆಯಲಿದ್ದು, ಇದು ಕೋಮು ಸೌಹಾರ್ದತೆಯ ಸಂಕೇತವಾಗಿರಲಿದೆ.
ಜನವರಿ 18ರಂದು ನಡೆಯಲಿರುವ ಪರ್ಯಾಯೋತ್ಸವದ ದಿನದಂದು ಭಕ್ತಾದಿಗಳ ಅನುಕೂಲಕ್ಕಾಗಿ 10,000 ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲು ಸಮಿತಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿಯ ಸದಸ್ಯರಾದ ಹಂಝತ್, ರಫೀಕ್ ದೊಡ್ಡಣಗುಡ್ಡೆ, ಪೀರು ಸಾಹೇಬ್, ರಿಯಾಝ್ ಪಳ್ಳಿ, ಚಾರ್ಲ್ಸ್ ಆಂಬ್ಲರ್, ಆರಿಫ್, ಅನ್ಸಾರ್ ಅಹಮದ್ ಮತ್ತು ಪ್ರಚಾರ ಸಮಿತಿಯ ಸದಸ್ಯ ರಹೀಮ್ ಉಜಿರೆ ಉಪಸ್ಥಿತರಿದ್ದರು.