ಮಂಗಳೂರು,ಜ. 03 (DaijiworldNews/AK): ನನಗೆ ಸಿಎಂ ಆಗಲು ಅಷ್ಟೊಂದು ಅರ್ಜೆಂಟ್ ಇಲ್ಲ. ಅದನ್ನು 20ವರ್ಷದ ಬಳಿಕ ನೋಡೋಣ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನತೆ ಮತ್ತೆ ನಾಲ್ಕು ಬಾರಿ ಗೆಲ್ಲಿಸಿ ಕಳುಹಿಸಿದ ಬಳಿಕ ಆಗಬೇಕಾದರೆ ನೋಡೋಣ. ಈಗ ನನಗೆ ರಾಜಕೀಯದ ವಿಚಾರವೇ ಗೊತ್ತಿಲ್ಲ. ಸ್ಪೀಕರ್ ಆದ ಬಳಿಕ ನನ್ನ ಪೊಲಿಟಿಕಲ್ ಚ್ಯಾನೆಲ್ ಬಂದ್ ಆಗಿದೆ. ಈಗ ನಾನು ಬರೀ ಸಂವಿಧಾನ ಹಾಗೂ ಸ್ಪೀಕರ್ ಚ್ಯಾನೆಲ್ ಮಾತ್ರ ನೋಡುವುದು ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ ಕೋಳಿ ಅಂಕಕ್ಕೆ ನಿರ್ಬಂಧ ವಿಧಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್, ಈ ಬಗ್ಗೆ ಈಗಾಗಲೇ ದೀರ್ಘ ಚರ್ಚೆ ನಡೆದಿದೆ. ಆದರೆ ಪೊಲೀಸ್ ಇಲಾಖೆ ಕೋಳಿ ಅಂಕದಲ್ಲಿ ಜೂಜು ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಅದನ್ನು ಬೇಕಾದರೂ ತಡೆಯಲಿ. ಆದರೆ ಧಾರ್ಮಿಕ ನಂಬಿಕೆಗೆ ತೊಂದರೆ ಕೊಡುವುದು ಬೇಡ ಎಂದು ಸಂಘಟಕರು ಹೇಳುತ್ತಿದ್ದಾರೆ. ಆದ್ದರಿಂದ ಸಂಸ್ಕ್ರತಿ ಪರಂಪರೆ ಉಳಿಯಬೇಕಾದರೆ ಇದರ ಬಗ್ಗೆ ಚರ್ಚಿಸಿ ಸೂಕ್ತ ನಿಯಮ ತರಬೇಕಾಗುತ್ತದೆ. ಈಗಾಗಲೇ ಕಾನೂನು ಮಂತ್ರಿಯೊಂದಿಗೆ ಮತ್ತು ಕಾನೂನು ಸಲಹಾ ಮಂಡಳಿಯೊಂದಿಗೆ ಮಾತನಾಡಿದ್ದೇನೆ. ಚರ್ಚೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಲಿನ ಶಾಸಕರಿಗೆ ನನ್ನ ಸಲಹೆಯನ್ನು ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಅದು ಬಗೆ ಹರಿಯಬಹುದು ವಿಶ್ವಾಸ ನನಗಿದೆ ಎಂದು ಹೇಳಿದರು.