ಬಂಟ್ವಾಳ, ಜ. 03 (DaijiworldNews/AA): ಗಡಿಪಾರು ಮಾಡಿರುವ ವ್ಯಕ್ತಿಯೋರ್ವರಿಗೆ ಆಶ್ರಯ ನೀಡಿದ್ದ ಆರೋಪದ ಮೇರೆಗೆ ಪುಣಚ ನಿವಾಸಿಯೋರ್ವರನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.

ಪುಣಚ ಗ್ರಾಮದ ಕಲ್ಲಾಜೆ ನಿವಾಸಿ ಉದಯ ರೈ ಅವರು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗಡಿಪಾರು ಆದೇಶವಿರುವ ವ್ಯಕ್ತಿಗೆ ಆಶ್ರಯ ನೀಡಿದ ಆರೋಪದ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯ ಗಂಭೀರ ಪ್ರಕರಣಗಳ ಆರೋಪಿ, ರೌಡಿ ಶೀಟರ್ ಕೇಪು ಗಣೇಶ್ ಎಂಬವರಿಗೆ ಗಡಿಪಾರು ಆದೇಶವಾಗಿತ್ತು. ಬಂಧನಕ್ಕೆ ಬೆದರಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆತನ ಬಂಧನಕ್ಕಾಗಿ ವಿಟ್ಲ ಠಾಣಾ ಪೊಲೀಸರು ಬಲೆ ಬೀಸಿದ್ದರು.
ನಂತರ ಆರೋಪಿ ಪುಣಚ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಆಶ್ರಯದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವಿಟ್ಲ ಠಾಣಾ ಪೊಲೀಸರ ತಂಡ ಪುಣಚ ಗ್ರಾಮದಲ್ಲಿ ಹುಡುಕಾಟ ನಡೆಸಿದೆ.
ಈ ವೇಳೆ ಪುಣಚ ಗ್ರಾಮದ ಕಲ್ಲಾಜೆ ನಿವಾಸಿ ಉದಯ ರೈ ಎಂಬವರು ತನ್ನ ಹಳೆಯ ಮನೆಯಲ್ಲಿ ರೌಡಿಶೀಟರ್ ಗೆ ಆಶ್ರಯ ನೀಡಿರುವುದು ಸ್ಪಷ್ಟವಾಗಿದೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ರೌಡಿಶೀಟರ್ ಗಣೇಶ್ ಪೂಜಾರಿ ಪರಾರಿಯಾಗಿದ್ದಾನೆ.
ಗಣೇಶ್ ಪೂಜಾರಿಗೆ ಆಶ್ರಯ ನೀಡಿದ ಆರೋಪದಲ್ಲಿ ಕಲ್ಲಾಜೆ ಉದಯ ರೈರವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.