ಬಂಟ್ವಾಳ, ಜ.03 (DaijiworldNews/TA): ಪುರಸಭೆಯಲ್ಲಿ ಕನಿಷ್ಠ ವೇತನದಡಿ ಮತ್ತು ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಪಾವತಿಸಿಲ್ಲ ಎಂದು ಆರೋಪಿಸಿ ಜ.7 ರಂದು ಪುರಸಭಾ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಬಂಟ್ವಾಳ ಪುರಸಭಾ ಕನಿಷ್ಠ ವೇತನ ಮತ್ತು ಹೊರಗುತ್ತಿಗೆ ನೌಕರರು ಸಂಬಂಧಿಸಿದ ಅಧಿಕಾರಿಗಳಿಗೆ ಅಧಿಕೃತವಾದ ಸಂದೇಶವನ್ನು ಪತ್ರದ ಮೂಲಕ ತಿಳಿಸಿದ್ದಾರೆ.

ಬಂಟ್ವಾಳ ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳಡಿ ಕನಿಷ್ಠ ವೇತನದಡಿ ಮತ್ತು ಹೊರಗುತ್ತಿಗೆಯಡಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಸೇವೆಯನ್ನು ನೀಡುತ್ತಾ ಬಂದಿರುವ ಕನಿಷ್ಠ ವೇತನ ಮತ್ತು ಹೊರಗುತ್ತಿಗೆ ನೌಕರರಿಂದ ಇಡೀ ಪುರಸಭಾ ಇಲಾಖೆಯ ಕೆಲಸ ಕಾರ್ಯಗಳು ಅತ್ಯಂತ ಸಲೀಸಾಗಿ ನಡೆಯುತ್ತಿದೆ.
ಇದುವರೆಗೂ ಅವರ ಸೇವೆಯು ಯಾವುದೇ ರೂಪದಲ್ಲಿ ಖಾಯಂಗೊಂಡಿರುವುದಿಲ್ಲ. ಆದರೆ ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗದೆ ಊಟಕ್ಕೂ ತೊಂದರೆಯಾಗಿದೆ. ಅದಕ್ಕೆ ಮೊದಲು ಯಾವುದೇ ಅಡ್ಡಿ ಅಂತಕ ಇಲ್ಲದೆ ವೇತನವನ್ನು ಪಾವತಿಸಿರುತ್ತಾರೆ. ಆದರೆ ಪ್ರಸ್ತುತ ನವೆಂಬರ್-2025 ಮತ್ತು ಡಿಸೆಂಬರ್-2025ರ ಮಾಸಿಕ ವೇತನ ಪಾವತಿಯಾಗದೇ ನಮ್ಮ ಜೀವನ ನಿರ್ವಹಣೆಗೆ ಹಾಗೂ ಬ್ಯಾಂಕ್ ಸಾಲ, ಸ್ವ ಸಹಾಯ ಸಂಘದ ಸಾಲ ಕಟ್ಟಲು ಮತ್ತು ಕೈ ಸಾಲ ಮಾಡಿರುವುದನ್ನು ತೀರಿಸಲು ಸಾಧ್ಯಾವಾಗದೆ ಕಂಗಲಾಗಿದ್ದೇವೆ. ಈ ಕೆಲಸವನ್ನು ನಂಬಿ ಜೀವನ ನಡೆಸುತ್ತಿರುವುದರಿಂದ 2 ತಿಂಗಳ ವೇತನ ಬಾಕಿಯಾಗಿದೆ. ನಮ್ಮ ಜೀವನ ನಿರ್ವಹಣೆ ಅಸ್ಥವ್ಯಸ್ತಗೊಂಡಿದೆ. ಆದ್ದರಿಂದ ನಾವು ಜ.7 ರಂದು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ನ್ಯಾಯಕ್ಕಾಗಿ ಪುರಸಭಾ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸುವುದಾಗಿ ತೀರ್ಮಾನಿಸಿದ್ದೇವೆ ಎಂದು ತಿಳಿಸಲಾಗಿದೆ.