ಮಂಗಳೂರು, ಡಿ. 23 (DaijiworldNews/AA): ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಮಂಗಳೂರು ನಗರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ನಕ್ಷತ್ರಗಳು, ಗೋದಲಿ ಮತ್ತು ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆ ಹಾಗೂ ರಸ್ತೆಬದಿಯ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ನಗರದ ಜನನಿಬಿಡ ಸೆಂಟ್ರಲ್ ಮಾರ್ಕೆಟ್ನಿಂದ ಹಂಪನಕಟ್ಟೆಯವರೆಗೆ ಎಲ್ಲಾ ಅಂಗಡಿಗಳಲ್ಲೂ ಸಂಜೆಯ ವೇಳೆ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.










ವಿವಿಧ ಗಾತ್ರದ ವರ್ಣರಂಜಿತ ಕಾಗದ ಮತ್ತು ಪ್ಲಾಸ್ಟಿಕ್ ನಕ್ಷತ್ರಗಳು, ಎಲ್ಇಡಿ ನಕ್ಷತ್ರಗಳು, ವಿದ್ಯುತ್ ದೀಪದ ಸರಗಳು ಮತ್ತು ಲಾಟೀನುಗಳು ಈ ಬಾರಿ ಹೆಚ್ಚು ಮಾರಾಟವಾಗುತ್ತಿವೆ. ಬಾಲ ಯೇಸು, ಮರಿಯಮ್ಮ, ಜೋಸೆಫ್, ದೇವದೂತರು ಮತ್ತು ಪ್ರಾಣಿಗಳ ಪ್ರತಿಮೆಗಳನ್ನೊಳಗೊಂಡ ಯೇಸುವಿನ ಜನನದ ದೃಶ್ಯ ಪ್ರದರ್ಶಿಸುವ ಅಂಗಡಿಗಳು ಕುಟುಂಬಗಳ ಗಮನ ಸೆಳೆಯುತ್ತಿವೆ. ಸಾಂಪ್ರದಾಯಿಕ ಬೆಥ್ ಲೆಹೆಮ್ ದೃಶ್ಯವನ್ನು ಮರುಸೃಷ್ಟಿಸಲು ಬೇಕಾದ ಒಣಹುಲ್ಲು, ಪಾಚಿ, ಥರ್ಮಕೋಲ್ ಬೆಟ್ಟಗಳು, ಸಣ್ಣ ಮನೆಗಳು ಮತ್ತು ಕೃತಕ ಕ್ರಿಸ್ಮಸ್ ಮರಗಳನ್ನು ಅಂಗಡಿಗಳಲ್ಲಿ ಸಂಗ್ರಹಿಸಲಾಗಿದೆ.
ಮನೆಯ ಮುಂದೆ ನಕ್ಷತ್ರಗಳನ್ನು ನೇತುಹಾಕುವುದು ಮತ್ತು ಮನೆಯಲ್ಲಿ ಗೋದಲಿ ನಿರ್ಮಿಸುವುದು ಹಬ್ಬದ ಅವಿಭಾಜ್ಯ ಅಂಗವಾಗಿದೆ. ಅನೇಕ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಬಂದು ತಮಗೆ ಇಷ್ಟವಾದ ಅಲಂಕಾರಿಕ ವಸ್ತುಗಳನ್ನು ಆರಿಸಿಕೊಳ್ಳುತ್ತಿರುವುದು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ.
ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ವ್ಯಾಪಾರ ಸುಧಾರಿಸುತ್ತಿರುವುದಕ್ಕೆ ವ್ಯಾಪಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೊನೆಯ ಕ್ಷಣದಲ್ಲಾಗುವ ಗೊಂದಲವನ್ನು ತಪ್ಪಿಸಲು ಜನರು ಈ ಬಾರಿ ಮೊದಲೇ ಬೇಕಾದ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಅಲ್ಲದೆ, ಸಾಂಪ್ರದಾಯಿಕ ಅಲಂಕಾರದ ಜೊತೆಗೆ ಆಧುನಿಕ ಸ್ಪರ್ಶ ನೀಡಲು ಅನೇಕರು ಹೊಸ ವಿನ್ಯಾಸದ ಎಲ್ಇಡಿ ನಕ್ಷತ್ರಗಳನ್ನು ಖರೀದಿಸುತ್ತಿದ್ದಾರೆ.
ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದಂತೆ ಚರ್ಚ್ ಆವರಣ ಮತ್ತು ಮಾರುಕಟ್ಟೆಗಳಲ್ಲಿ ಜನದಟ್ಟಣೆ ಇನ್ನು ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಬ್ಬದ ಸಡಗರವು ಮಂಗಳೂರಿನ ಕೋಮು ಸೌಹಾರ್ದತೆ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತಿದೆ.