ಮಂಗಳೂರು, ಡಿ. 23 (DaijiworldNews/AA): ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದ ಪತಿ ಹತ್ಯೆ ಪ್ರಕರಣದಲ್ಲಿ ಅಪರೂಪದ ನ್ಯಾಯಾಂಗ ನಿರ್ಣಯ ಹೊರಬಿದ್ದಿದೆ. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು, ಆರೋಪಿಯಾದ ಎಲಿಯಮ್ಮ ಎಂಬವರು ಗಂಡನನ್ನು ಕೊಂದಿರುವುದು ಸಾಬೀತಾದರೂ, ಆಕೆಗೆ ಅಪರಾಧಿ ಅಲ್ಲ ಎಂದು ತೀರ್ಪು ನೀಡಿದ್ದಾರೆ.

2022ರ ಜುಲೈ 5ರಂದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ, ಬೆಳಗಿನ ಜಾವ 5:30ರ ವೇಳೆಗೆ ಪತಿ ಯೋಹಾನನ್ ಅವರನ್ನು ಪತ್ನಿ ಎಲಿಯಮ್ಮ ಕೊಲೆ ಮಾಡಿದ್ದರು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಯ ವೇಳೆ ಆರೋಪಿಯೇ 'ತಾನು ಕೊಲೆ ಮಾಡಿರುವುದು ಹೌದು' ಎಂದು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು. ಆದರೂ ಪ್ರಕರಣದ ಗಂಭೀರತೆಯನ್ನು ಗಮನಿಸಿದ ನ್ಯಾಯಾಲಯ, ಸಂಪೂರ್ಣ ಸಾಕ್ಷಿ ವಿಚಾರಣೆಗೆ ಆದೇಶಿಸಿತು.
ಸಾಕ್ಷಿ ವಿಚಾರಣೆ ವೇಳೆ, ಆರೋಪಿಗೆ ದೀರ್ಘಕಾಲದ ಮಾನಸಿಕ ಅಸ್ವಸ್ಥತೆ ಇದ್ದದ್ದು ಹಾಗೂ ಆಕೆ 'ಡೆಲ್ಯೂಷನಲ್ ಡಿಸಾರ್ಡರ್' ಎಂಬ ಕಾಯಿಲೆಯಿಂದ ಬಳಲುತ್ತಿದ್ದದ್ದು ದೃಢಪಟ್ಟಿತು. ಕೃತ್ಯ ಮಾಡುವ ಸಮಯದಲ್ಲಿ ಸರಿ ತಪ್ಪಿನ ಅರಿವು ಆಕೆಗೆ ಇರಲಿಲ್ಲ ಎಂಬುದು ವೈದ್ಯಕೀಯ ಮತ್ತು ತಾಂತ್ರಿಕ ಸಾಕ್ಷ್ಯಗಳಿಂದ ಹೊರಬಂದಿತು. ಇದನ್ನು ಆಧರಿಸಿ, ಭಾರತೀಯ ದಂಡ ಸಂಹಿತೆಯಡಿ ಆರೋಪಿಗೆ ಅಪರಾಧಿಕ ಹೊಣೆಗಾರಿಕೆ ಇರುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು.
ಇದೇ ವೇಳೆ, ಆರೋಪಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿ ಮಾನಸಿಕ ಪರೀಕ್ಷೆ ನಡೆಸುವಂತೆ ಜೈಲು ಅಧೀಕ್ಷಕರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಆಕೆಯನ್ನು ಬಿಡುಗಡೆಗೊಳಿಸಬಹುದೇ ಹಾಗೂ ಆಕೆಯಿಂದ ಸಮಾಜಕ್ಕೆ ಯಾವುದೇ ಅಪಾಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
ಈ ಸಂಕೀರ್ಣ ಪ್ರಕರಣದಲ್ಲಿ ಆರೋಪಿಪರ ವಕೀಲರಾದ ವಿಕ್ರಮರಾಜ್ ಎ. ಹಾಗೂ ಜೀವನ ಎಂ. ಅವರು ವಾದ ಮಂಡಿಸಿದ್ದರು.