Karavali
ಉಡುಪಿ: ರೈತನೆಂದರೆ ಅನ್ನದಾತ; ಕಾಲದೊಂದಿಗೆ ಬದಲಾಗುತ್ತಿರುವ ಕೃಷಿ ಮತ್ತು ಸಮಾಜದ ಮನೋಭಾವ
- Tue, Dec 23 2025 03:02:02 PM
-
ಉಡುಪಿ, ಡಿ. 23 (DaijiworldNews/AA): ಡಿಸೆಂಬರ್ 23 ರಾಷ್ಟ್ರವ್ಯಾಪಿ ರೈತ ದಿನ ಆಚರಿಸಲಾಗುತ್ತದೆ. ಭಾರತದ ಆಹಾರ ಭದ್ರತೆಯ ಬೆನ್ನೆಲುಬಾಗಿರುವ ರೈತರ ಶ್ರಮ, ತ್ಯಾಗ ಮತ್ತು ಬದುಕಿನ ಸಂಕಷ್ಟಗಳನ್ನು ನೆನಪಿಸಿಕೊಳ್ಳುವ ದಿನ. ದೇಶದ ಪ್ರತಿಯೊಬ್ಬ ನಾಗರಿಕನ ಊಟದ ತಟ್ಟೆಯಲ್ಲಿ ಅನ್ನ ಇರುವುದಕ್ಕೆ ಕಾರಣ ರೈತ. ಆದರೆ ಈ ಅನ್ನದಾತನ ಬದುಕು ಮಾತ್ರ ಇಂದು ಅನೇಕ ಪ್ರಶ್ನೆಗಳ ಮಧ್ಯೆ ಸಿಲುಕಿದೆ.

ಭಾರತವು ಮೂಲತಃ ಕೃಷಿ ಪ್ರಧಾನ ದೇಶವಾಗಿದೆ. ಸ್ವಾತಂತ್ರ್ಯ ನಂತರದ 1951ರ ಜನಗಣತಿ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿನ ಸುಮಾರು 70% ಜನರು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಮೇಲೆ ಅವಲಂಬಿತರಾಗಿದ್ದರು. ಕೃಷಿ ಒಂದು ಗೌರವದ ವೃತ್ತಿಯಾಗಿದ್ದು, ಕುಟುಂಬದಿಂದ ಕುಟುಂಬಕ್ಕೆ ಹಸ್ತಾಂತರವಾಗುವ ಸಂಸ್ಕೃತಿಯೂ ಆಗಿತ್ತು. ಹಳ್ಳಿಗಳು ಸ್ವಾವಲಂಬಿ ಜೀವನದ ಕೇಂದ್ರವಾಗಿದ್ದವು.
ಆದರೆ ಕಾಲಕ್ರಮೇಣ ಪರಿಸ್ಥಿತಿಗಳು ಬದಲಾಗಿವೆ. ಇಂದಿನ ಅಂಕಿಅಂಶಗಳನ್ನು ಗಮನಿಸಿದರೆ, ಭಾರತದಲ್ಲಿ ಕೃಷಿಯಲ್ಲಿ ತೊಡಗಿರುವ ಜನಸಂಖ್ಯೆ ಸುಮಾರು 42-45%ಕ್ಕೆ ಇಳಿದಿದೆ. ಹೊಸ ತಲೆಮಾರು ಕೃಷಿಯಿಂದ ದೂರ ಸರಿಯುತ್ತಿರುವುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಶಿಕ್ಷಣ, ಉದ್ಯೋಗಾವಕಾಶ, ನಗರೀಕರಣ ಮತ್ತು ಆರ್ಥಿಕ ಅಸ್ಥಿರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಹಳೆಯ ಕೃಷಿ ಪದ್ಧತಿ ಪ್ರಕೃತಿಗೆ ಹತ್ತಿರವಾಗಿತ್ತು. ಮಳೆ ಆಧಾರಿತ ಕೃಷಿ, ಜೈವಿಕ ಗೊಬ್ಬರ, ದೇಶೀಯ ಬೀಜಗಳು ಮತ್ತು ಪರಸ್ಪರ ಸಹಕಾರವೇ ಅದರ ಶಕ್ತಿ. ಆದರೆ ಇಂದಿನ ಹೊಸ ಕೃಷಿ ಯಾಂತ್ರೀಕರಣ, ರಾಸಾಯನಿಕ ಗೊಬ್ಬರ, ಹೈಬ್ರಿಡ್ ಬೀಜಗಳು ಮತ್ತು ತಂತ್ರಜ್ಞಾನ ಆಧಾರಿತವಾಗಿದೆ. ಉತ್ಪಾದನೆ ಹೆಚ್ಚಿದರೂ, ವೆಚ್ಚವೂ ಹೆಚ್ಚಿದೆ. ಇದರ ಪರಿಣಾಮವಾಗಿ ರೈತ ಸಾಲದ ಬಲೆಗೆ ಸಿಲುಕುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.
ರೈತನ ಜವಾಬ್ದಾರಿ ಕೇವಲ ಬೆಳೆ ಬೆಳೆಯುವುದಲ್ಲ. ದೇಶದ ಆಹಾರ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯ ಸಮತೋಲನವನ್ನು ಕಾಪಾಡುವುದು ರೈತನ ಮೇಲಿದೆ. ಆದರೆ ಈ ಜವಾಬ್ದಾರಿಗಳಿಗೆ ತಕ್ಕ ಬೆಂಬಲ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉಳಿದಿದೆ.
ಇಂದಿನ ರೈತನು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಮಳೆಯ ಅನಿಶ್ಚಿತತೆ, ಹವಾಮಾನ ಬದಲಾವಣೆ, ಬೆಲೆ ಸ್ಥಿರತೆ ಕೊರತೆ, ಮಧ್ಯವರ್ತಿಗಳ ಶೋಷಣೆ, ಸಾಲದ ಒತ್ತಡ, ವಿಮೆ ಮತ್ತು ಬೆಂಬಲ ಬೆಲೆ ವ್ಯವಸ್ಥೆಯ ದೌರ್ಬಲ್ಯ ಇವೆಲ್ಲ ರೈತನ ಬದುಕನ್ನು ಸಂಕೀರ್ಣಗೊಳಿಸಿವೆ. ಬೆಳೆಯ ಬೆಲೆ ಮಾರುಕಟ್ಟೆಯಲ್ಲಿ ಕುಸಿದಾಗ ರೈತನ ಶ್ರಮಕ್ಕೆ ಗೌರವ ಸಿಗುವುದಿಲ್ಲ.
ಸಮಾಜದ ದೃಷ್ಟಿಕೋನವೂ ಬದಲಾಗಿದೆ. ರೈತನ ಮಗ ರೈತನಾಗಬಾರದು ಎಂಬ ಮಾತು ಸಾಮಾನ್ಯವಾಗಿದೆ. ಕೃಷಿಯನ್ನು ಹಿಂದುಳಿದ ವೃತ್ತಿಯಂತೆ ನೋಡುವ ಮನೋಭಾವ ಬೆಳೆಯುತ್ತಿದೆ. ಆದರೆ ಅದೇ ಸಮಾಜ ರೈತನ ಬೆಳೆದ ಅನ್ನದ ಮೇಲೆ ಬದುಕುತ್ತಿದೆ ಎಂಬ ಸತ್ಯವನ್ನು ಮರೆತಂತಿದೆ.
ಹೊಸ ತಲೆಮಾರು ಕೃಷಿಗೆ ಮರಳಬೇಕಾದರೆ, ಕೃಷಿಯನ್ನು ಲಾಭದಾಯಕ, ಗೌರವಯುತ ಮತ್ತು ತಂತ್ರಜ್ಞಾನ ಸ್ನೇಹಿ ವೃತ್ತಿಯಾಗಿ ರೂಪಿಸಬೇಕು. ಜೈವಿಕ ಕೃಷಿ, ಮೌಲ್ಯವರ್ಧಿತ ಉತ್ಪನ್ನಗಳು, ನೇರ ಮಾರುಕಟ್ಟೆ ವ್ಯವಸ್ಥೆ, ಡಿಜಿಟಲ್ ಕೃಷಿ ಮತ್ತು ಸರ್ಕಾರದ ಪ್ರೋತ್ಸಾಹ ಯೋಜನೆಗಳು ಯುವಕರನ್ನು ಕೃಷಿಯತ್ತ ಆಕರ್ಷಿಸಬಹುದು. ರಾಷ್ಟ್ರೀಯ ರೈತ ದಿನವು ಕೇವಲ ಆಚರಣೆಗೆ ಸೀಮಿತವಾಗಬಾರದು.
ರೈತನ ಬದುಕನ್ನು ಸುಧಾರಿಸುವ ನೈಜ ಕ್ರಮಗಳು ಅಗತ್ಯ. ರೈತ ಬಲಿಷ್ಠನಾದರೆ ದೇಶ ಬಲಿಷ್ಠವಾಗುತ್ತದೆ. ಅನ್ನದಾತನ ಬೆವರು ಗೌರವಿಸಲ್ಪಟ್ಟಾಗ ಮಾತ್ರ ಸಮಾಜದ ಪ್ರಗತಿ ಸಾರ್ಥಕವಾಗುತ್ತದೆ.
ರೈತನು ಉಳಿದರೆ ಕೃಷಿ ಉಳಿಯುತ್ತದೆ, ಕೃಷಿ ಉಳಿದರೆ ದೇಶ ಉಳಿಯುತ್ತದೆ.
ಇತ್ತೀಚಿನ ದಿನಗಳಲ್ಲಿ ರೈತನ ಬದುಕು ಕೇವಲ ಹೊಲ ಮನೆಗಳ ನಡುವೆ ಸೀಮಿತವಾಗಿಲ್ಲ; ಅವನು ಮಾರುಕಟ್ಟೆ, ಬ್ಯಾಂಕ್, ಹವಾಮಾನ ಇಲಾಖೆ ಮತ್ತು ಸರ್ಕಾರದ ನೀತಿಗಳ ನಡುವೆ ಸಿಲುಕಿಕೊಂಡಿದ್ದಾನೆ. ಬೆಳೆ ಬಿತ್ತುವ ಮುನ್ನವೇ ಹವಾಮಾನ ಮುನ್ಸೂಚನೆ, ಬೀಜದ ಬೆಲೆ, ಗೊಬ್ಬರದ ಲಭ್ಯತೆ, ಸಾಲದ ಬಡ್ಡಿದರ ಎಲ್ಲವು ರೈತನ ನಿದ್ರೆಯನ್ನು ಕದಡುತ್ತವೆ. ಬೆಳೆ ಕೈಗೆ ಬಂದರೂ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗದೆ ಹೋಗುವುದು ರೈತನ ಮನೋಬಲವನ್ನು ಕುಗ್ಗಿಸುತ್ತದೆ.ಹೆಚ್ಚುತ್ತಿರುವ ಹವಾಮಾನ ಬದಲಾವಣೆ ಕೃಷಿಗೆ ಮತ್ತೊಂದು ದೊಡ್ಡ ಸವಾಲಾಗಿದೆ. ಅಕಾಲಿಕ ಮಳೆ, ಬರ, ಪ್ರವಾಹ, ಕೀಟರೋಗಗಳ ಹೆಚ್ಚಳ ಇವೆಲ್ಲವು ರೈತನ ಆದಾಯವನ್ನು ಅಸ್ಥಿರಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆ ಮತ್ತು ಸರ್ಕಾರದ ಪರಿಹಾರ ಯೋಜನೆಗಳು ಸಮಯಕ್ಕೆ ಸರಿಯಾಗಿ ರೈತನ ಕೈ ತಲುಪದಿರುವುದು ವಿಷಾದಕರ ಸಂಗತಿ. ಮಹಿಳಾ ರೈತರು ಮತ್ತು ಕೃಷಿ ಕಾರ್ಮಿಕರ ಪಾತ್ರವನ್ನು ಸಮಾಜ ಸಾಕಷ್ಟು ಗುರುತಿಸಿಲ್ಲ. ಹೊಲದಲ್ಲಿನ ದುಡಿಮೆ, ಮನೆ ನಿರ್ವಹಣೆ, ಪಶುಸಂಗೋಪನೆ ಎಲ್ಲವನ್ನೂ ಸಮಾನವಾಗಿ ನಿಭಾಯಿಸುವ ಮಹಿಳೆಯರು ಕೃಷಿಯ ಮೌನ ಶಕ್ತಿಯಾಗಿದ್ದಾರೆ. ಇವರಿಗೆ ಭೂಸ್ವಾಮ್ಯ ಹಕ್ಕು, ಸಾಲ ಸೌಲಭ್ಯ ಮತ್ತು ತರಬೇತಿ ನೀಡುವುದು ಕೃಷಿ ಕ್ಷೇತ್ರದ ಬಲವರ್ಧನೆಗೆ ಅಗತ್ಯ.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಆಧಾರಿತ ಸಣ್ಣ ಕೈಗಾರಿಕೆಗಳು, ಸಂಸ್ಕರಣಾ ಘಟಕಗಳು ಮತ್ತು ಸಂಗ್ರಹ ವ್ಯವಸ್ಥೆಗಳು ಅಭಿವೃದ್ಧಿಯಾದರೆ ರೈತನಿಗೆ ಹೆಚ್ಚುವರಿ ಆದಾಯದ ಅವಕಾಶ ಸೃಷ್ಟಿಯಾಗಬಹುದು. ಕೃಷಿ ಕೇವಲ ಬದುಕಿನ ಮಾರ್ಗವಲ್ಲ, ಅದು ಉದ್ಯಮವಾಗಬೇಕಿದೆ.
ಇಂದು ರೈತನಿಗೆ ಬೇಕಿರುವುದು ಸಹಾನುಭೂತಿ ಅಲ್ಲ, ಸಮಾನತೆ ಮತ್ತು ನ್ಯಾಯ. ನೀತಿ ನಿರ್ಧಾರಕರು, ಸಮಾಜ ಮತ್ತು ಗ್ರಾಹಕರು ಎಲ್ಲರೂ ರೈತನ ಶ್ರಮವನ್ನು ಗೌರವಿಸುವ ಮನೋಭಾವ ಬೆಳೆಸಬೇಕು. ನಾವು ತಿನ್ನುವ ಪ್ರತಿಯೊಂದು ಅನ್ನದ ಕಣದಲ್ಲೂ ರೈತನ ಬೆವರು ಅಡಗಿದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು. ರಾಷ್ಟ್ರೀಯ ರೈತ ದಿನವು ನಮಗೆ ಒಂದು ಪ್ರಶ್ನೆಯನ್ನು ಕೇಳುತ್ತದೆ ನಾವು ರೈತನಿಗಾಗಿ ಏನು ಮಾಡುತ್ತಿದ್ದೇವೆ? ಉತ್ತರ ಕ್ರಿಯೆಯಲ್ಲಿ ಕಾಣಬೇಕಾಗಿದೆ ಅಷ್ಟೇ. ರೈತ ಸಂತೋಷವಾಗಿದ್ದರೆ ಮಾತ್ರ ದೇಶದ ಭವಿಷ್ಯ ಸುರಕ್ಷಿತವಾಗಿರುತ್ತದೆ.
ರೈತನೆಂದರೆ ಅನ್ನದಾತ ಮಾತ್ರವಲ್ಲ; ಆತ ದೇಶದ ಜೀವನಾಡಿ.ಉಷಾ ಭಟ್
ಎಂ ಜಿ ಎಂ ಕಾಲೇಜು ಉಡುಪಿ