ಸುಳ್ಯ, ಡಿ. 18(DaijiworldNews/TA): ಯುವಜನ ಸಂಯುಕ್ತ ಮಂಡಳಿ (ರಿ.), ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ ಚೊಕ್ಕಾಡಿ ಪರಿಸರದ ಅಂಗಡಿಗಳ ಮುಂದಿದ್ದ ಕಳೆಗಳನ್ನು ಕಡಿದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.



ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಕಾಡು ಬೆಳೆದು ಸಾರ್ವಜನಿಕರಿಗೆ ನಡೆದಾಡಲು ಅನಾನುಕೂಲ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆಗಳನ್ನು ಕಡಿದು ಪರಿಸರವನ್ನು ಸ್ವಚ್ಛಗೊಳಿಸಿ ಊರನ್ನು ಸುಂದರಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಅಂಗಡಿ ಮಾಲಕರು ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆಯ ಮಹತ್ವವನ್ನು ವಿವರಿಸಿ, ಆರೋಗ್ಯಕರ ಹಾಗೂ ಸ್ವಚ್ಛ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲಾಯಿತು.
ಸ್ವಚ್ಛತಾ ಜಾಗೃತಿ ಸಂದೇಶವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಯೂರಿ ಯುವತಿ ಮಂಡಲದ ಸ್ಥಾಪಕಾಧಕ್ಷೆ ಉಷಾಲತಾ ಪಡ್ಪು , ಮಾಜಿ ಕಾರ್ಯದರ್ಶಿ ಮಧುಶ್ರೀ ಕೇನಡ್ಕ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯೆಯರು ಸಕ್ರಿಯವಾಗಿ ಭಾಗವಹಿಸಿದರು. ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.