ಧರ್ಮಸ್ಥಳ, ಡಿ. 18(DaijiworldNews/TA): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಅವರನ್ನು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, 1 ಲಕ್ಷ ರೂ. ಬಾಂಡ್ ನೀಡಿ ಅವರು ಜೈಲಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮತ್ತೆ ಗಡಿಪಾರಿ ನೋಟಿಸ್ ಜಾರಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ಮೊನ್ನೆಯಷ್ಟೇ ಗಡಿಪಾರು ನೋಟಿಸ್ ನೀಡಿದ್ದ ಸಹಾಯಕ ಆಯುಕ್ತರು ಇದೀಗ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ, ಯಾಕೆ ಗಡಿಪಾರು ಮಾಡಬಾರದು ಎಂಬುದಕ್ಕೆ ಕಾರಣ ಕೇಳಿದ್ದಾರೆ.
ಡಿ.7ರಂದು ಸಹಾಯಕ ಆಯುಕ್ತರ ಗಡಿಪಾರಿ ನೋಟಿಸ್ಗೆ ಮಹೇಶ್ ಶೆಟ್ಟಿ ತಿಮರೋಡಿ ಅವರು ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದರು. ಈ ಆಕ್ಷೇಪಣೆ ವಿಚಾರಣೆಯ ವೇಳೆ ವಕೀಲರು ಮತ್ತು ಸಹಾಯಕ ಆಯುಕ್ತರ ನಡುವೆ ವಾದ-ವಿವಾದ ನಡೆದಿದ್ದು, ಅಂತಿಮವಾಗಿ ತಿಮರೋಡಿ ವಿರುದ್ಧ ಮತ್ತೆ ಗಡಿಪಾರು ಆದೇಶ ನೀಡಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ತಿಮರೋಡಿ ವಿರುದ್ಧ ಈ ಹಿಂದಿನ ಪ್ರಕರಣಗಳ ಜೊತೆಗೆ ಇತ್ತೀಚಿನ ಕೆಲವು ಪ್ರಕರಣಗಳನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ. ಡಿ.18ರಿಂದ 2026ರ ಡಿ.17ರವರೆಗೆ, ಅಂದರೆ ಒಂದು ವರ್ಷದ ಅವಧಿಗೆ ಗಡಿಪಾರಿಗೆ ಆದೇಶ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಈ ಹಿಂದೆ ಗಡಿಪಾರು ಆದೇಶವನ್ನು ಪ್ರಶ್ನಿಸಿ ಹಾಗೂ ಅದನ್ನು ರದ್ದುಪಡಿಸುವಂತೆ ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಗಡಿಪಾರಿ ಆದೇಶವನ್ನು ರದ್ದು ಮಾಡಿ, ಸೆಕ್ಷನ್ ಸರಿಪಡಿಸಿ ಹೊಸ ಆದೇಶ ನೀಡುವಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ಸೂಚನೆ ನೀಡಿತ್ತು.
ಹೈಕೋರ್ಟ್ ಸೂಚನೆಯಂತೆ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇದೀಗ ಮತ್ತೆ ಗಡಿಪಾರು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತೆ ತಿಳಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶ ಜಾರಿಗೊಂಡಿದೆ.