ಮಂಗಳೂರು, ಡಿ. 17 (DaijiworldNews/TA): ಮನೆ, ಸಂಸಾರ, ಮಗ ಮತ್ತು ಉದ್ಯಮವನ್ನು ಸಮರ್ಥವಾಗಿ ನಿಭಾಯಿಸುತ್ತಾ, ಮಾಡೆಲಿಂಗ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಂಗಳೂರಿನ ಸುಂದರಿ ವಿದ್ಯಾ ಸಂಪತ್ ಫಿಲಿಫೈನ್ಸ್ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 22 ದೇಶಗಳ ಸ್ಪರ್ಧಿಗಳನ್ನು ಮೀರಿಸಿ ಅವರು ಮೊದಲ ಸ್ಥಾನ ಪಡೆದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.


ಮಂಗಳೂರಿನ ಚಿತ್ರಾಪುರದಲ್ಲಿ ಸೂಪರ್ ಮಾರ್ಕೆಟ್ ಉದ್ಯಮ ನಡೆಸುತ್ತಿರುವ ವಿದ್ಯಾ ಸಂಪತ್ ಉದ್ಯಮಿಯಾಗಿಯೂ, ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯ ವಿವಿಧ ಸುತ್ತುಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿ ಅವರು ಅಂತಾರಾಷ್ಟ್ರೀಯ ಮಟ್ಟದ ಈ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಡಿಸೆಂಬರ್ 2ರಿಂದ 10ರವರೆಗೆ ಫಿಲಿಫೈನ್ಸ್ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಆಗಿದ್ದರು ಎಂಬುದು ವಿಶೇಷ.
ಈ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ವಿಶ್ವದ 22 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಟ್ಯಾಲೆಂಟ್ ರೌಂಡ್, ನ್ಯಾಷನಲ್ ಕಾಸ್ಟ್ಯೂಮ್ ರೌಂಡ್ ಸೇರಿದಂತೆ ಹಲವು ಕಠಿಣ ಸುತ್ತುಗಳನ್ನು ಎದುರಿಸಿದ ವಿದ್ಯಾ ಸಂಪತ್ ತಮ್ಮ ಪ್ರತಿಭೆ, ಆತ್ಮವಿಶ್ವಾಸ ಮತ್ತು ವಿಭಿನ್ನ ಚಿಂತನೆಯ ಮೂಲಕ ತೀರ್ಪುಗಾರರನ್ನು ಮೆಚ್ಚಿಸಿ ಗ್ರಾಂಡ್ ವಿನ್ನರ್ ಆಗಿ ಹೊರಹೊಮ್ಮಿದರು.
ನ್ಯಾಷನಲ್ ಕಾಸ್ಟ್ಯೂಮ್ ಸುತ್ತಿನಲ್ಲಿ ವಿದ್ಯಾ ಸಂಪತ್ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ತಾವರೆ ಹೂವಿನ ಸಂಕೇತಗಳನ್ನು ಒಳಗೊಂಡ ವಿಶೇಷ ವಸ್ತ್ರ ವಿನ್ಯಾಸ ಪ್ರದರ್ಶಿಸಿದರು. ‘ಕಸದಿಂದ ರಸ’ ಎಂಬ ಪರಿಕಲ್ಪನೆಯಲ್ಲಿ ಬಳಸಿ ಎಸೆದ ಟಿನ್ಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ತಯಾರಿಸಿದ ಕಾಸ್ಟ್ಯೂಮ್ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು. ಜೊತೆಗೆ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತಿಮೆಯನ್ನು ವಿವಿಧ ರಾಷ್ಟ್ರಗಳ 22 ಮಂದಿ ಸ್ಪರ್ಧಿಗಳಿಗೆ ಉಡುಗೊರೆಯಾಗಿ ನೀಡಿ, ನಮ್ಮ ನಾಡಿನ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸಿದರು.
ಮುಂಬೈನಲ್ಲಿ ಜನಿಸಿದರೂ ಸದ್ಯ ಮಂಗಳೂರು ವಾಸಿಯಾಗಿರುವ ವಿದ್ಯಾ ಸಂಪತ್ ಪಾತ್ ವೇ ಮಾಡೆಲಿಂಗ್ ಸ್ಟುಡಿಯೋದ ದೀಪಕ್ ಗಂಗೂಲಿ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡೀಸ್ ಸಲೂನ್ನ ಮರ್ಸಿ ಅವರಿಂದ ತರಬೇತಿ ಪಡೆದಿದ್ದಾರೆ. ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಅವರು ‘ಬ್ಯೂಟಿ ವಿತ್ ಬ್ರೈನ್’ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ.
ಈ ಸಾಧನೆ ಕುರಿತು ಮಾತನಾಡಿದ ವಿದ್ಯಾ ಸಂಪತ್, “ಈ ಸ್ಪರ್ಧೆಯಲ್ಲಿ ಹಲವು ಕಠಿಣ ಸುತ್ತುಗಳು ಇದ್ದವು. ಫಿಲಿಫೈನ್ಸ್ಗೆ ಹೋಗಿ ಸ್ಪರ್ಧಿಸುವುದು ಸುಲಭವಾಗಿರಲಿಲ್ಲ. ಆದರೆ ಸಿಕ್ಕ ಪ್ರೋತ್ಸಾಹ ಮತ್ತು ಬೆಂಬಲದಿಂದ ಇದು ಸಾಧ್ಯವಾಯಿತು. ಗ್ರಾಂಡ್ ವಿನ್ನರ್ ಆಗಿ ಆಯ್ಕೆಯಾದ ಕ್ಷಣ ಅತ್ಯಂತ ಖುಷಿ ತಂದಿತು” ಎಂದು ಸಂತಸ ವ್ಯಕ್ತಪಡಿಸಿದರು.