ಉಡುಪಿ, ಡಿ. 16 (DaijiworldNews/TA): ಜಗತ್ತು ದಿನದಿಂದ ದಿನಕ್ಕೆ ಡಿಜಿಟಲ್ ಆಗುತ್ತಿದ್ದಂತೆ ಜೀವನದ ಬಹುತೇಕ ಎಲ್ಲ ಕಾರ್ಯಗಳು ಆನ್ಲೈನ್ ಮೂಲಕವೇ ನಡೆಯುತ್ತಿವೆ. ಊಟ, ಶಾಪಿಂಗ್ ಮಾತ್ರವಲ್ಲದೆ ಈಗ ನಿಶ್ಚಿತಾರ್ಥ ಮತ್ತು ಮದುವೆಯೂ ಆನ್ಲೈನ್ಗೆ ಕಾಲಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಮಾಗಡಿ ಮೂಲದ ಯುವಕ ಹಾಗೂ ಉಡುಪಿ ಮೂಲದ ಯುವತಿ ವೀಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘನಾ ಅವರು ಆನ್ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ವರನ ಅನುಪಸ್ಥಿತಿಯಲ್ಲಿ ಎರಡೂ ಕುಟುಂಬಗಳು ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ನೆರವೇರಿಸಿವೆ.
ಕೆನಡಾದಿಂದ ವೀಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ : ಕೆನಡಾದಲ್ಲಿ ಉದ್ಯೋಗದಲ್ಲಿರುವ ಸುಹಾಸ್ ಅವರಿಗೆ ಭಾರತಕ್ಕೆ ಬರಲು ರಜೆ ಸಿಗದ ಕಾರಣ ನಿಶ್ಚಿತಾರ್ಥಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈಗಾಗಲೇ ಜನವರಿ 7 ಮತ್ತು 8ರಂದು ಮದುವೆ ದಿನಾಂಕ ನಿಗದಿಯಾಗಿರುವುದರಿಂದ, ಕುಟುಂಬಗಳು ಆನ್ಲೈನ್ ನಿಶ್ಚಿತಾರ್ಥಕ್ಕೆ ನಿರ್ಧರಿಸಿವೆ.
ವೀಡಿಯೋ ಕಾಲ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ, ಬ್ರಾಹ್ಮಣ ಸಂಪ್ರದಾಯದಂತೆ ಪೂಜೆ ನೆರವೇರಿಸಿ, ಎಲ್ಇಡಿ ಪರದೆಯ ಮುಂದೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ವಧು–ವರರಿಗೆ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಕ್ಯಾಮೆರಾ ಎದುರಲ್ಲೇ ಇಬ್ಬರೂ ಪರಸ್ಪರ ಉಂಗುರ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡರು.
12 ಗಂಟೆಗಳ ಸಮಯ ವ್ಯತ್ಯಾಸದ ನಡುವೆಯೂ ಸಂಭ್ರಮ : ಭಾರತ ಮತ್ತು ಕೆನಡಾ ನಡುವಿನ ಸುಮಾರು 12 ಗಂಟೆಗಳ ಕಾಲಮಾನ ವ್ಯತ್ಯಾಸದ ನಡುವೆಯೂ ಈ ಕಾರ್ಯಕ್ರಮ ಸಫಲವಾಗಿ ನಡೆಯಿತು. ಉಡುಪಿಯಲ್ಲಿ ಬೆಳಿಗ್ಗೆ ನಿಶ್ಚಿತಾರ್ಥ ನಡೆದರೆ, ಕೆನಡಾದಲ್ಲಿ ಮಧ್ಯರಾತ್ರಿ ಈ ವಿಶೇಷ ಕ್ಷಣವನ್ನು ವರನು ಕುಟುಂಬದೊಂದಿಗೆ ಹಂಚಿಕೊಂಡರು.
ಡಿಜಿಟಲ್ ತಂತ್ರಜ್ಞಾನವು ದೂರದ ಅಂತರವನ್ನೂ ಹತ್ತಿರ ಮಾಡಬಲ್ಲದು ಎಂಬುದಕ್ಕೆ ಈ ಆನ್ಲೈನ್ ನಿಶ್ಚಿತಾರ್ಥ ಉತ್ತಮ ಉದಾಹರಣೆಯಾಗಿದ್ದು, ಹೊಸ ತಲೆಮಾರಿನ ಮದುವೆ ಸಂಪ್ರದಾಯಕ್ಕೆ ಹೊಸ ಆಯಾಮ ನೀಡಿದೆ.