ಮಂಗಳೂರು, ಡಿ. 16 (DaijiworldNews/TA): ಎಲ್ಲಿಯ ನ್ಯೂಜಿಲೆಂಡ್? ಎಲ್ಲಿಯ ಮಂಗಳೂರು? ಆದರೆ ಇಲ್ಲಿ ಗಡಿ, ಜಾತಿ, ಭಾಷೆ, ಸಂಪ್ರದಾಯ ದಾಟಿ ಹೃದಯ ಸಂಬಂಧಗಳು ಬೆಸೆದಿವೆ. ಹೌದು, ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಡಿ.14ರಂದು ಮಂಗಳೂರು ಹೊಸಬೆಟ್ಟುವಿನ ಹುಡುಗ ಅರ್ಜುನ್ ಕುಮಾರ್ ಮತ್ತು ನ್ಯೂಜಿಲೆಂಡ್ ಹುಡುಗಿ ಲಿಲ್ಲಿ ಚೂ ಮದುವೆಯಾಗಿ ಹೊಸ ಬಾಳಿನ ಹೊಸ್ತಿಲು ತುಳಿದಿದ್ದಾರೆ.

ಮಂಗಳೂರಿನ ಕೆನರಾ ಕಾಲೇಜು, ಶ್ರೀನಿವಾಸ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಬಳಿಕ ಉನ್ನತ ವ್ಯಾಸಂಗಕ್ಕೆ ನ್ಯೂಜಿಲೆಂಡ್ ಗೆ ತೆರಳಿದ್ದರು. ಈ ಸಂದರ್ಭ ಸೈಕಾಲಜಿ ವಿದ್ಯಾಭ್ಯಾಸ ಮಾಡುತ್ತಿರುವ ಲಿಲ್ಲಿ ಚೂ ಅವರ ಪರಿಚಯ ಗೆಳೆಯರ ಮೂಲಕ ಆಗಿತ್ತು. ಕೋವಿಡ್ ಅವಧಿಯಲ್ಲಿ ನ್ಯೂಜಿಲೆಂಡ್ ನಲ್ಲಿ ಸಂಕಷ್ಟದ ಸಮಯ, ಈ ಮಧ್ಯೆ ಅರ್ಜುನ್ ಗೆ ಕೌಟುಂಬಿಕ ಆಘಾತವೊಂದು ಬಂದಿದ್ದು, ಇದರಿಂದ ಅರ್ಜುನ್ ಕುಸಿದು ಹೋಗಿದ್ದರು.
ಈ ಅವಧಿಯಲ್ಲಿ ಅರ್ಜುನ್ ಕುಮಾರ್ ನೆರವಿಗೆ ಬಂದು ಸಾಂತ್ವನ ಹೇಳಿ ಧೈರ್ಯ ತುಂಬಿದ್ದು ಇದೇ ಲಿಲ್ಲಿ ಚೂ. ಆಕೆಯ ಮಾನವೀಯ ಹೃದಯಕ್ಕೆ ಮನಸೋತ ಅರ್ಜುನ್ ಕುಮಾರ್ ಗೆ ಗೊತ್ತಿಲ್ಲದೇ ಆಕೆಯ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ತಮ್ಮ ಪ್ರೀತಿಯ ಬಗ್ಗೆ ಅರ್ಜುನ್-ಲಿಲ್ಲಿ ಮನೆಯವರಿಗೆ ಮನವರಿಕೆ ಮಾಡಿದಾಗ ಎರಡೂ ಕುಟುಂಬಗಳು ಒಪ್ಪಿಕೊಂಡವು. ಅರ್ಜುನ್ ಅಭಿಲಾಷೆಯಂತೆ ಭಾರತೀಯ ಸಂಪ್ರದಾಯ ಪ್ರಕಾರ ತಮ್ಮೂರಲ್ಲೇ ಮದುವೆಯಾಗಲು ನಿರ್ಧರಿಸಿ ಲಿಲ್ಲಿಗೆ ತಿಳಿಸಿದ್ದರು. ಇದಕ್ಕೆ ಲಿಲ್ಲಿ ತುಂಬಾ ಖುಷಿಪಟ್ಟು ಒಪ್ಪಿಗೆ ಸೂಚಿಸಿದ್ದಾರೆ. ಲಿಲ್ಲಿ ಚೂ ಮಂಗಳೂರಿಗೆ ಬರುವ ಮುನ್ನ ಯೂಟ್ಯೂಬ್ನಲ್ಲಿ ಭಾರತೀಯ ಸಂಪ್ರದಾಯದ ಮದುವೆಯ ಬಗ್ಗೆ ತಿಳಿದುಕೊಂಡಿದ್ದರು. ಇದರಿಂದ ಮದುವೆ ಸಂದರ್ಭ ಏನೆಲ್ಲ ವಿಧಿ-ವಿಧಾನಗಳಿದ್ದವೋ ಅದನ್ನೆಲ್ಲ ಚಾಚೂ ತಪ್ಪದೆ ಸಲೀಸಾಗಿ ಮಾಡುತ್ತಿದ್ದರು.