ಸುಳ್ಯ, ಡಿ. 11 (DaijiworldNews/TA): ರೈತರ ಖಾತೆಗೆ ಬೆಳೆ ವಿಮೆ ಕಡಿಮೆ ಜಮೆಯಾಗುತ್ತಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರೈತರು ದೂರುಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಸಹಕಾರಿ ಸಂಘಗಳ ಪ್ರಮುಖರು ಸಭೆ ನಡೆಸಿ, ಮುಂದಿನ ನಡೆ ಹಾಗೂ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು.

ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಅವರ ನೇತೃತ್ವದಲ್ಲಿ ಸಭೆ ನಡೆಯಿತು. 2016ರಿಂದ ಆರಂಭಗೊಂಡಿರುವ ಬೆಳೆ ವಿಮೆಯಲ್ಲಿ ಈ ವರೆಗೆ ಉತ್ತಮ ರೀತಿಯಲ್ಲಿ ಬೆಳೆ ವಿಮೆ ಮೊತ್ತ ರೈತರಿಗೆ ಪಾವತಿಯಾಗಿತ್ತು. ಆದರೆ ಈ ವರ್ಷ ಕನಿಷ್ಠ ಮೊತ್ತದ ವಿಮೆ ಜಮೆಯಾಗಿರುವುದು ರೈತರಿಗೆ ಆತಂಕ ತಂದೊಡ್ಡಿದೆ. ಯಾವ ಕಾರಣಕ್ಕೆ ಬೆಳೆ ವಿಮೆ ಮೊತ್ತ ಕಡಿಮೆ ಪಾವತಿಯಾಗಿದೆ ಎಂದು ತಿಳಿದುಕೊಳ್ಳಬೇಕಿದೆ ಎಂದು ಪ್ರಮುಖರು ಪ್ರಸ್ತಾವಿಸಿದರು. ಈ ಭಾಗದಲ್ಲಿ ಆಗಿರುವ ಮಳೆ ಪ್ರಮಾಣ ಹಾಗೂ ಅದರ ಪರಿಣಾಮದ ಬಗ್ಗೆ ಹವಾಮಾನ ವಿಪತ್ತು ಸಂಸ್ಥೆ ಸಂಬಂಧಿಸಿದ ಕಳುಹಿಸಿದ ಮಾಹಿತಿ ತಪ್ಪಾಗಿರುವ ಸಾಧ್ಯತೆಯಿದೆ ಎಂದು ಸಹಕಾರಿಯೋರ್ವರು ಪ್ರಸ್ತಾವಿಸಿದರು.
ಕೃಷಿ ಬೆಳೆ ಹಾನಿ ಪ್ರಮಾಣ ತಿಳಿಸುವಲ್ಲಿ ತೋಟಗಾರಿಕಾ ಇಲಾಖೆ ಎಡವಟ್ಟು ಮಾಡಿರುವ ಸಾಧ್ಯತೆಯೂ ಇದೆ. ವಿಮೆ ಮೊತ್ತ ಕಡಿಮೆ ಜಮೆ ಆಗಿರುವುದರಿಂದ ಮರುಪರಿಶೀಲನೆ ನಡೆಸಿ ಸೂಕ್ತ ಪರಿಹಾರದ ವಿಮೆ ಮೊತ್ತ ಜಮೆಯಾಗಲು ಕ್ರಮ ವಹಿಸಬೇಕು ಸೇರಿದಂತೆ ವಿವಿಧ ಸಲಹೆಗಳನ್ನು ಸಹಕಾರಿಗಳು ನೀಡಿದರು. ಎಸ್.ಎನ್. ಮನ್ಮಥ ಅವರು ಮಾತನಾಡಿ, ಇನ್ನು 3-4 ದಿನಗಳ ಬಳಿಕ ತಾಲೂಕಿಗೆ ಎಷ್ಟು ವಿಮೆ ಮೊತ್ತ ಬಂದಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹಿಸಿ, ಯಾವ ಕಾರಣಕ್ಕೆ ಈ ರೀತಿ ಆಗಿದೆ. ಈ ಸಮಸ್ಯೆ ಸುಳ್ಯ ಮಾತ್ರವಲ್ಲದೇ ಜಿಲ್ಲೆಯಲ್ಲಿಯೂ ಆಗಿದೆಯಾ ಎಂಬುದನ್ನು ತಿಳಿದು ಮುಂದೆ ಕಾನೂನು ರೀತಿಯಲ್ಲಿ ಹೋರಾಟ ನಡೆಸುವ ಬಗ್ಗೆ ಸಭೆ ನಿರ್ಧರಿಸಿತು.
ಜಿಲ್ಲಾ ಹಂತದಲ್ಲೂ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಬೆಳೆ ವಿಮೆ ಮೊತ್ತ ಕಡಿಮೆ ಜಮೆ ಆಗಿರುವ ಬಗ್ಗೆ ಈ ಭಾಗದ ಶಾಸಕರು ಅಧಿವೇಶನದಲ್ಲಿ ಪ್ರಸ್ತಾವಿಸಿ ಸಮರ್ಪಕ ಉತ್ತಮ ಹಾಗೂ ಪರಿಹಾರವನ್ನು ಸರಕಾರದ ಹಂತದಲ್ಲೇ ಪಡೆಯುವ ಕೆಲಸ ಆಗಬೇಕು ಎಂದು ಒತ್ತಾಯಿ ಸಲಾಯಿತು. ಸಹಕಾರಿ ಸಂಘಗಳ ಪ್ರಮುಖ ರಾದ ಸಂತೋಷ್ ಕುತ್ತಮೊಟ್ಟೆ, ದಾಮೋದರ ಮದುವೆ ಗದ್ದೆ, ಸೋಮಶೇಖರ ಕೊಯಿಂ ಗಾಜೆ, ಜಯಪ್ರಕಾಶ್ ಕುಂಚಡ್ಕ, ವಿಷ್ಣು ಭಟ್, ಜಯಪ್ರಕಾಶ್ ಮೊಗ್ರ ಮುಂತಾದವರು ಸೂಚನೆಗಳನ್ನು ನೀಡಿದರು.