ಕಾರ್ಕಳ, ಡಿ. 10 (DaijiworldNews/AA): ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ದನ ಮತ್ತು ಕರುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಸಂಘ ಪರಿವಾರದ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.



ಬಂಧಿತ ಆರೋಪಿಯನ್ನು ನಲ್ಲೂರಿನ ನಿವಾಸಿ, ಶಿವಪ್ರಸಾದ್ ಅಲಿಯಾಸ್ ಅನ್ನು ಮಡಿವಾಳ(28) ಎಂದು ಗುರುತಿಸಲಾಗಿದೆ.
ನಲ್ಲೂರಿನ ಅಶ್ರಪ್ ಆಲಿ ಮನೆಯಲ್ಲಿ ಅಕ್ರಮವಾಗಿ ಕಾಸಾಯಿಖಾನೆ ಕಾರ್ಯಚರಿಸುತ್ತಿದ್ದ ಕುರಿತು ತನಿಖೆಯನ್ನು ಮುಂದುವರಿಸಿದ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ನೇತೃತ್ವದ ತಂಡ ಪ್ರಕರಣದ ಪ್ರಮುಖ ಆರೋಪಿ ಶಿವಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಶಿವಪ್ರಸಾದ್ ಪೊಲೀಸರ ವಿಚಾರದ ವೇಳೆಗೆ ಕೆಲ ಮಹತ್ವ ಅಂಶಗಳನ್ನು ಬಾಯಿ ಬಿಟ್ಟಿದ್ದಾನೆ. ಜಾನುವಾರು ಬ್ರೋಕರ್ ಆಗಿ ದುಡಿಯುತ್ತಿರುವ ಶಿವಪ್ರಸಾದ್ ದನಗಳನ್ನು ಮಾರಾಟ ಮಾಡುವ ನೆಪದಲ್ಲಿ ಸಾಕು ದನ ಹಾಗೂ ಕರುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಅವುಗಳನ್ನು ಕಾಸಾಯಿಖಾನೆಗೆ ಮಾರಾಟ ಮಾಡುತ್ತಿದ್ದನು. ಅವುಗಳಲ್ಲಿ ನಲ್ಲೂರಿನ ಅಶ್ರಫ್ ಆಲಿಗೂ ಮಾರಾಟ ಮಾಡಿದ್ದನು.
ಶಿವಪ್ರಸಾದ ಓರ್ವ ಸಂಘ ಪರಿವಾರದ ಕಾರ್ಯಕರ್ತನಾಗಿದ್ದಾನೆ. ತಾನು ಯಾರಿಗೆಲ್ಲ ದನ ಹಾಗೂ ಕರುಗಳನ್ನು ಮಾರಾಟ ಮಾಡುತ್ತಿದ್ದನೋ ಆ ವಿಚಾರವನ್ನು ಸಂಘ ಪರಿವಾರದ ಇತರಿಗೆ ಗೊತ್ತು ಪಡಿಸಿ ಪೊಲೀಸರಿಗೆ ಮಾಹಿತಿ ರವಾನೆ ಮಾಡುತ್ತಿದ್ದರು ಎಂಬ ಅಂಶ ಬಯಲಾಗಿದೆ.
ಆರೋಪಿ ಶಿವಪ್ರಸಾದ್ ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆಯ ಹಿನ್ನೆಲೆ...
ನವೆಂಬರ್ 12 ರಂದು ಕಾರ್ಕಳ ಗ್ರಾಮಾಂತರ ಪೊಲೀಸರು ನಲ್ಲೂರಿನ ಮನೆಯೊಂದರ ಮೇಲೆ ದಾಳಿ ನಡೆಸಿ, ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಆರೋಪದ ಮೇಲೆ ಅಶ್ರಫ್ ಅಲಿ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದರು. ಈ ಬಂಧನದ ನಂತರ, ಕಳವು ಮಾಡಿದ ಹಸು ಮತ್ತು ಕರುವನ್ನು ಅಲ್ಲಿ ವಧೆ ಮಾಡಲಾಗಿದೆ ಎಂದು ಆರೋಪಿಸಿ, ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಮನೆಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ವಿಶ್ವಹಿಂದು ಪರಿಷದ್ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ಆಗ್ರಹಿಸಿದ್ದರು.
ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ, ಬಂಧಿತ ದಂಪತಿಯನ್ನು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ಈ ಹಸು ಮತ್ತು ಕರುವನ್ನು ಸಂಘ ಪರಿವಾರದ ಕಾರ್ಯಕರ್ತನಾದ ಶಿವಪ್ರಸಾದ್ ಮಾರಾಟ ಮಾಡಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಶಿವಪ್ರಸಾದ್ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತ ಬೇರೆಯವರಿಂದ ಜಾನುವಾರುಗಳನ್ನು ಖರೀದಿಸಿ ನಂತರ ಅವುಗಳನ್ನು ಅಶ್ರಫ್ ಅಲಿಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.